

ಬೆಂಗಳೂರು: ಯಶ್ ಅಭಿನಯದ 'ಕೆಜಿಎಫ್ 2' ಚಿತ್ರದ ಟೀಸರ್ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಯಶ್ ಹುಟ್ಟುಹಬ್ಬವಾದ ಜನವರಿ ಎಂಟರಂದು ಚಿತ್ರದ ಟೀಸರ್ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಬಹಳ ಸಂಭ್ರಮ ಹಾಗೂ ಕಾತುರದಿಂದ ಈ ಟೀಸರ್ಗಾಗಿ ಕಾಯುತ್ತಿದ್ದಾರೆ.
ಅದರಲ್ಲೂ ಯಶ್ ಅವರ ಹಲವು ಅಭಿಮಾನಿಗಳು ಸಂಘಗಳು ತಮ್ಮ ನಗರದ ಚಿತ್ರಮಂದಿರಗಳಲ್ಲಿ, ಈ ಟೀಸರ್ ಬಿಡುಗಡೆಗಾಗಿಯೇ ವಿಶೇಷ ಪ್ರದರ್ಶನ ಏರ್ಪಡಿಸಿದ್ದಾರೆ. ಜನವರಿ 08ರ ಬೆಳಿಗ್ಗೆ 10.18ಕ್ಕೆ ಈ ಟೀಸರ್ ಬಿಡುಗಡೆಯಾಗಲಿದ್ದು, ಅದಕ್ಕಾಗಿ ಚಿತ್ರಮಂದಿರಗಳನ್ನು ಬುಕ್ ಮಾಡಲಾಗಿದೆ.
ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘವು, ಜನವರಿ ಎಂಟರಂದು ಯಶ್ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನ ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಟೀಸರ್ ಬಿಡುಗಡೆ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಗರುಡ ರಾಮ್ ಅವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ 2021ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುತ್ತದಂತೆ. ಜತೆಗೆ ರಕ್ತದಾನವನ್ನೂ ಆಯೋಜಿಸಲಾಗಿದೆ. ಇದೆಲ್ಲದರ ಜತೆಗೆ ಸಿಹಿ ಹಂಚಲಾಗುತ್ತದೆ ಎಂದು ಹೇಳಲಾಗುತ್ತಿದೆ.
ದೊಡ್ಡಬಳ್ಳಾಪುರ ತಾಲ್ಲೂಕು ಯುವ ಕೇಸರಿ ಯಶ್ ಬಾಸ್ ಅಭಿಮಾನಿಗಳ ಸಂಘದಿಂದ, ದೊಡ್ಡಬಳ್ಳಾಪುರದ ಸೌಂದರ್ಯ ಮಹಲ್ ಚಿತ್ರಮಂದಿರದಲ್ಲಿ ತಾಲ್ಲೂಕಿನ ಎಲ್ಲಾ ಯಶ್ ಅಭಿಮಾನಿಗಳಿಗೆ ಉಚಿತವಾಗಿ ಟೀಸರ್ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಸಮಾರಂಭದಲ್ಲಿ ಗಣ್ಯವ್ಯಕ್ತಿಗಳಿಗೆ ಸನ್ಮಾನ ಮಾಡುವುದರ ಜತೆಗೆ ಯಶ್ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕಟ್ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಮಾಸ್ಕ್ ಇಲ್ಲದೆ ಪ್ರವೇಶವಿಲ್ಲ ಮತ್ತು ಸಾಮಾಜಿಕ ಅಂತರ ಕಡ್ಡಾಯ ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ಇದಲ್ಲದೆ ಹಲವು ಊರುಗಳಲ್ಲಿ 'ಕೆಜಿಎಫ್ 2' ಚಿತ್ರದ ಟೀಸರ್ ಪ್ರದರ್ಶನದ ಜತೆಗೆ, ಯಶ್ ಹುಟ್ಟುಹಬ್ಬದ ಸಂಬಂಧ ಸಿಹಿ ಹಂಚಲಾಗುತ್ತಿದೆ.