

ಮುಂಬೈ: ಖ್ಯಾತ ಗಾಯಕ ಸೋನು ನಿಗಮ್ (Sonu Nigam) ಮತ್ತು ತಂಡದವರ ಮೇಲೆ ನಡೆದ ಹಲ್ಲೆ ಘಟನೆಗೆ ಸಂಬಂಧಿಸಿದಂತೆ, ಸೋನು ನಿಗಮ್ ಇದೀಗ ಠಾಣೆಗೆ ತೆರಳಿ ಪೊಲೀಸ್ ದೂರು ನೀಡಿದ್ದಾರೆ. ಚೆಂಬೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರಿದಿಯಾಗಿದೆ. ಸೋಮವಾರ ರಾತ್ರಿ ಮುಂಬೈಯ ಚೆಂಬೂರು ಎಂಬಲ್ಲಿ ಸಂಗೀತ ಕಾರ್ಯಕ್ರಮದ ವೇಳೆ ಹಲ್ಲೆ ನಡೆದಿದೆ.
ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ವೇದಿಕೆಯ ಬಳಿ ಬಂದು ಸೋನು ನಿಗಮ್ ಮತ್ತು ತಂಡದವರ ಮೇಲೆ ಹಲ್ಲೆ ಮಾಡಿ, ತಳ್ಳಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದೆ. ಶಿವಸೇನೆ ಪಕ್ಷದ ಶಾಸಕ ಪ್ರಕಾಶ್ ಫರ್ತೇಕರ್ ಪುತ್ರ ಹಾಗೂ ಬೆಂಗಲಿಗರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸದ್ಯ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಸೋನು ನಿಗಮ್ ಅವರಿಂದ ಘಟನೆಯ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಶಾಸಕ ಪ್ರಕಾಶ್ ಫರ್ತೇಕರ್ ಮಗ, ಸೋನು ನಿಗಮ್ ಮ್ಯಾನೇಜರ್ನೊಂದಿಗೆ ಮೊದಲು ಅನುಚಿತವಾಗಿ ವರ್ತಿಸಿದ್ದಾನೆ. ಇದರಿಂದ ಘರ್ಷಣೆ ಉಂಟಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಘಟನೆಯಲ್ಲಿ ಸೋನು ನಿಗಮ್ ಪುತ್ರ ರಬ್ಬಾನಿ ಖಾನ್ ವೇದಿಕೆಯಿಂದ ಕೆಳಗೆ ನೂಕಲ್ಪಟ್ಟಿದ್ದು ಗಾಯಗಳಾಗಿವೆ. ಸದ್ಯ ಚೆಂಬೂರಿನ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ಬಗ್ಗೆ ಶಾಸಕ ಪ್ರಕಾಶ್ ಫರ್ತೇಕರ್ ಪ್ರತಿಕ್ರಿಯಿಸಿದ್ದು, ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸೋನು ನಿಗಮ್ ಅಭಿಮಾನಿಗಳು ವೇದಿಕೆಯತ್ತ ಆಗಮಿಸಿ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಈ ವೇಳೆ ತಳ್ಳಾಟ ನಡೆದಿದೆ ಎಂದು ಹೇಳಿದ್ದಾರೆ. ಸದ್ಯ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)