

ಬೆಂಗಳೂರು: ಪ್ರಯಾಣಿಕರಿಗೆ ಉತ್ಲೃಷ್ಟ ದರ್ಜೆಯ ಸೇವೆಯನ್ನು ನೀಡುತ್ತಾ ಬಂದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೊಸದಾಗಿ ಐಷಾರಾಮಿ ಸೌಲಭ್ಯವುಳ್ಳ ವಿನೂತನ ಮಾದರಿಯ ಸ್ಲೀಪರ್ ಬಸ್ಗಳನ್ನು ಪರಿಚಯಿಸಿದೆ. ಮಹತ್ವಾಕಾಂಕ್ಷೆಯ ವೋಲ್ವೋ ಅಂಬಾರಿ ಬಸ್ ಸೇವೆಗೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಸಾಂಕೇತಿಕ ಚಾಲನೆ ನೀಡಿದ್ದಾರೆ.
ವಿಧಾನಸೌಧದ ಮಹಾದ್ವಾರದ ಬಳಿ ವೋಲ್ವೋ ಮಲ್ಟಿ ಆಕ್ಸಲ್ ಬಸ್ ಗಳ ಲೋಕಾರ್ಪಣೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರಿಗೆ ಸಂಸ್ಥೆಗೆ ಈ ವರ್ಷ ಒಂದು ಸಾವಿರ ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಅಂತಾರಾಜ್ಯ ಪ್ರಯಾಣಿಕರಿಗಾಗಿ ಸಿದ್ಧವಾದ ‘9600 ವೋಲ್ವೋ ಮಲ್ಟಿ-ಆಕ್ಸಲ್ ಸ್ಲೀಪರ್’ ಬಸ್ಗೆ “ಅಂಬಾರಿ ಉತ್ಸವ” ಎಂದು ನಾಮಕರಣ ಮಾಡಲಾಗಿದೆ. ಕೆಎಸ್ಆರ್ಟಿಸಿ ನಿರ್ವಹಿಸುವ ಎಲ್ಲಾ ಸ್ಲೀಪರ್ ಕೋಚ್ ಬಸ್ಗಳಿಗಿಂತ ಅತ್ಯುತ್ತಮ ಸೌಕರ್ಯ ಹೊಂದಿರುವ ಬಸ್ ಇದಾಗಿದೆ. ಅಂಬಾರಿ ಉತ್ಸವ್- ಸೆಲೆಬ್ರೇಷನ್ ಆಫ್ ಜರ್ನಿ ಎಂದು ಎಂಬ ಘೋಷವಾಕ್ಯದಲ್ಲಿ ಕೆಎಸ್ಆರ್ಟಿಸಿ ಬಸ್ ಸೇವೆ ನೀಡಲಿದೆ.
1.70 ಕೋಟಿ ರೂ ವೆಚ್ಚ
ವ್ಯವಸ್ಥಿತ, ಸುಖಕರ ಪ್ರಯಾಣಕ್ಕೆ ಸುಸಜ್ಜಿತ ಸೌಲಭ್ಯವುಳ್ಳ ಪ್ರತಿ ಬಸ್ ಖರೀದಿಗೆ ಸಾರಿಗೆ ಸಂಸ್ಥೆಯು 1.70 ಕೋಟಿ ರೂ. ವೆಚ್ಚ ಮಾಡಿದೆ. ಮೊದಲ ಹಂತದಲ್ಲಿ 20 ಬಸ್ ಗಳನ್ನು ವೋಲ್ವೋ ಸಂಸ್ಥೆ ಪೂರೈಸಿದೆ. ಈ ವರ್ಷ ಒಟ್ಟು 50 ಬಸ್ ಗಳನ್ನು ಖರೀದಿಸಲು ಸಂಸ್ಥೆ ತೀರ್ಮಾನಿಸಿದೆ.
ರೋಪಿಯನ್ ಮಾದರಿ ಎಸಿ-ಸ್ಲೀಪರ್ ಬಸ್ ಆಗಿದ್ದು, ಈ ಬಸ್ಗಳು ಬೆಂಗಳೂರು ನಗರದಿಂದ ಮಂಗಳೂರು, ಕುಂದಾಪುರ, ಪುಣೆ, ಹೈದರಾಬಾದ್, ಪಣಜಿ, ಸಿಕಂದ್ರಾಬಾದ್, ಎರ್ನಾಕುಲಂ, ತ್ರಿಶೂರ್, ತಿರುವನಂಥಪುರಂಗೆ ಸಂಚರಿಸಲಿವೆ. ಬೆಂಗಳೂರು ಮತ್ತು ಮಂಗಳೂರು ವಿಭಾಗಗಳಿಂದ ಈ ಬಸ್ಗಳು ಕಾರ್ಯನಿರ್ವಹಿಸಲಿವೆ.