

ನವದೆಹಲಿ: ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ಇಂದು (ಸೆ.03) ಬೆಳಗ್ಗೆ ದಾಖಲಾಗಿದ್ದಾರೆ.
ಸಣ್ಣ ಪ್ರಮಾಣದಲ್ಲಿ ಜ್ವರದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ ವೈದ್ಯರು ತಪಾಸಣೆ ನಡೆಸುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.
ಸೊನಿಯಾ ಅವರು ಇದೇ ವರ್ಷದಲ್ಲಿ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಜನವರಿ 12ರಂದು ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿ, ಉಸಿರಾಟದ ಸೋಂಕಿನ ಚಿಕಿತ್ಸೆ ಪಡೆದುಕೊಂಡು ಜನವರಿ 17ರಂದು ಡಿಸ್ಚಾರ್ಜ್ ಆಗಿದ್ದರು.
ಇದೇ ಆಸ್ಪತ್ರೆಗೆ ಕಳೆದ ಮಾರ್ಚ್ 2ರಂದು ಸೋನಿಯಾ ಗಾಂಧಿ ಅವರು ದಾಖಲಾಗಿ, ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.
ಎರಡು ದಿನಗಳ ಹಿಂದಷ್ಟೇ ಮುಂಬೈನಲ್ಲಿ ನಡೆದ ಇಂಡಿಯಾ ವಿಪಕ್ಷ ಕೂಟ ಸಭೆಯಲ್ಲಿ ಸೋನಿಯಾ ಗಾಂಧಿ ಭಾಗವಹಿಸಿದ್ದರು. ಈ ಸಭೆಯಲ್ಲಿ 13 ಸದಸ್ಯರ ಸಮನ್ವಯ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಈ ಸಮಿತಿಯಲ್ಲಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ, ಶಿವಸೇನೆಯ ಸಂಜಯ್ ರಾವುತ್, ಎಎಪಿಯ ರಾಘವ್ ಚಡ್ಡಾ, ಎನ್ಸಿಪಿಯ ಶರದ್ ಪವಾರ್, ಐಎನ್ಸಿಯ ಕೆಸಿ ವೇಣುಗೋಪಾಲ್, ಒಮರ್ ಅಬ್ದುಲ್ಲಾ, ಹೇಮಂತ್ ಸೊರೆನ್, ಎಂಕೆ ಸ್ಟಾಲಿನ್ ಮತ್ತು ಆರ್ಜೆಡಿಯ ತೇಜಸ್ವಿ ಯಾದವ್, ಸಮಾಜವಾದಿ ಪಕ್ಷದ ಡಿ.ಎಸ್. ರಾಜಾ ಮತ್ತು ಪಿಡಿಪಿಯ ಮೆಹಬೂಬಾ ಮುಫ್ತಿ ಇದ್ದಾರೆ.
ಸಭೆಯಲ್ಲಿ ಇಂಡಿಯಾ ಒಂದಾಗುತ್ತದೆ, ಇಂಡಿಯಾ ಗೆಲ್ಲುತ್ತದೆ ಎಂಬ ಘೋಷವಾಕ್ಯ ಹೊರಡಿಸಲಾಯಿತು. (ಏಜೆನ್ಸೀಸ್)