

ತುಮಕೂರು: ಆಪರೇಷನ್ಗೆಂದು ಬಂದಿದ್ದ ಮಹಿಳೆಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದ್ದು, ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ.
ಮಾನಸ (30) ಮೃತ ದುರ್ದೈವಿ. ತುಮಕೂರಿನ ಮಹಾಲಕ್ಷ್ಮಿನಗರದಲ್ಲಿರುವ ಚಿನ್ಮಯ ನರ್ಸಿಂಗ್ ಹೋಮ್ ವಿರುದ್ಧ ಮಾನಸ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಐದು ವರ್ಷಗಳ ಹಿಂದೆ ಅರುಣ್ ಎಂಬುವರನ್ನು ಮದುವೆಯಾಗಿದ್ದ ಮಾನಸ, ತುಮಕೂರು ವಿವಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು.
ಮದುವೆಯಾಗಿ ವರ್ಷಗಳೇ ಕಳೆದರು ಇನ್ನು ಮಕ್ಕಳಾಗಿಲ್ಲ ಎಂಬ ಚಿಂತೆಯಲ್ಲಿದ್ದರು. ಅಲ್ಲದೆ, ಕಳೆದ ಒಂದೂವರೆ ತಿಂಗಳಿನಿಂದ ಚಿನ್ಮಯ ಆಸ್ಪತ್ರೆ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಮಧ್ಯೆ ಗರ್ಭಕೋಶದಲ್ಲಿ 3 ಗ್ರಾಂ ಗಡ್ಡೆಯಿದೆ, ಅದನ್ನು ಆಪರೇಷನ್ ಮಾಡಿ ತೆಗೆಯಬೇಕೆಂದು ಹೇಳಿದ್ದರು. ಅದರಂತೆ ಮೊನ್ನೆ (ಸೆ.01) ಸಂಜೆ ಆಪರೇಷನ್ಗೆಂದು ಮಾನಸ ಆಸ್ಪತ್ರೆಗೆ ದಾಖಲಾಗಿದ್ದರು.
ನಿನ್ನೆ (ಸೆ.02) ರಾತ್ರಿ ಆಪರೇಷನ್ ನಡೆಸುವಾಗ ಮಾನಸ ಮೃತಪಟ್ಟಿದ್ದಾರೆ. ಮಾನಸ ಸಾವಿಗೆ ವೈದ್ಯರೇ ಕಾರಣ ಎಂದು ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ಇದೀಗ ಮಾನಸರನ್ನು ಕಳೆದುಕೊಂಡು, ಪತಿ ಹಾಗೂ ಕುಟುಂಬಸ್ಥರ ಕಣೀರಾಕುತ್ತಿದ್ದಾರೆ.
ಚಿನ್ಮಯ ನರ್ಸಿಂಗ್ ಹೋಮ್ ತುಮಕೂರಿನ ಬಟವಾಡಿ ಬಳಿ ಇದೆ. ಬೆಂಗಳೂರು ಮೂಲದ ವೈದ್ಯೆ ಡಾ.ಶಶಿಕಲಾ ಆಪರೇಷನ್ ನಡೆಸಿದ್ದರು ಎನ್ನಲಾಗಿದೆ. ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಗೆ ಕುಟುಂಬಸ್ಥರು ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.