'ಪದವಿಪೂರ್ವ'ದಲ್ಲಿ ನಟಿ ಸೋನಲ್ ಮೊಂತೆರೋ​; ಇಬ್ಬರು ನಾಯಕಿಯರ ಜೊತೆಗೆ ಮತ್ತೊಬ್ಬ ಬೆಡಗಿ...

feature
Published on

ಬೆಂಗಳೂರು: ಕರಾವಳಿ ಬೆಡಗಿ, ಪಂಚತಂತ್ರ, ರಾಬರ್ಟ್ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಸೋನಲ್ ಮೊಂತೆರೋ ಇದೀಗ 'ಪಿಯು'ಗೆ ಸೇರಿದ್ದಾರೆ. ಅರ್ಥಾತ್, 'ಪದವಿಪೂರ್ವ' ಚಿತ್ರತಂಡಕ್ಕೆ ಅವರ ಪ್ರವೇಶವಾಗಿದ್ದು, ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಲ್ಲದೆ ಸೋನಲ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲಮ್ಸ್​ ಜಂಟಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಪದವಿಪೂರ್ವ' ಸಿನಿಮಾಗೆ ನಿರ್ದೇಶಕ ಹರಿಪ್ರಸಾದ್ ಜಯಣ್ಣ ಅವರು ಆ್ಯಕ್ಷನ್​-ಕಟ್ ಹೇಳುತ್ತಿದ್ದಾರೆ. ನಟಿ ಸೋನಲ್ ಈ ಚಿತ್ರದಲ್ಲಿ ಬಹು ಮುಖ್ಯವಾದ ಅತಿಥಿ ಪಾತ್ರವೊಂದರಲ್ಲಿ ನಟಿಸುತ್ತಿದ್ದು ಆ ಪಾತ್ರದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೋನಲ್ ನಟನೆಯ ಭಾಗದ ಚಿತ್ರೀಕರಣವು ಬೆಂಗಳೂರು ಹಾಗು ಮಂಗಳೂರಿನ ಸುತ್ತಮುತ್ತ ಸೆಪ್ಟೆಂಬರ್​ನಲ್ಲಿ ನಡೆಯಲಿದ್ದು, ಚಿತ್ರದ ಐದನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಕಲ ಸಿದ್ಧತೆ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.

ಚಿತ್ರದ ನಾಲ್ಕನೇ ಹಂತದ ಚಿತ್ರೀಕರಣವು ಕೇವಲ ಮೂರು ದಿನಗಳ ಹಿಂದೆಯಷ್ಟೇ ಪೂರ್ಣಗೊಂಡಿದ್ದು, ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಡೆಸಿದ ಚಿತ್ರೀಕರಣದ ದೃಶ್ಯಗಳು ಅತ್ಯಂತ ಸೊಗಸಾಗಿ ಮೂಡಿಬಂದಿದೆ ಎಂದು ಹರಿಪ್ರಸಾದ್ ಜಯಣ್ಣ ಸಂತೋಷ ವ್ಯಕ್ತಪಡಿಸಿದ್ದಾರೆ. ಹೊಸಬರ ದಂಡೇ ಇರುವ ಈ ಚಿತ್ರದಲ್ಲಿ ನಾಯಕನಾಗಿ ಯುವ ಪ್ರತಿಭೆ ಪೃಥ್ವಿ ಶಾಮನೂರು, ನಾಯಕಿಯರಾಗಿ ಅಂಜಲಿ ಅನೀಶ್ ಮತ್ತು ಯಶ ಶಿವಕುಮಾರ್ ಅಭಿನಯಿಸಿದ್ದಾರೆ.

ಯೋಗರಾಜ್ ಭಟ್ ಅವರ ಸಾಹಿತ್ಯದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಖ್ಯಾತ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಅವರ ಸಿನಿಮಾಟೋಗ್ರಫಿ, ಮಧು ತುಂಬಕೆರೆ ಅವರ ಎಡಿಟಿಂಗ್ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net