

ಕೊಡಗು: ರಾಜ್ಯಾದ್ಯಂತ ಕರೊನಾ ಹಾವಳಿ ಹೆಚ್ಚಾಗಿದ್ದು, ಪ್ರತಿನಿತ್ಯ ನೂರಾರು ಜನರು ಸೋಂಕಿಗೆ ಬಲಿಯಾಗಲಾರಂಭಿಸಿದ್ದಾರೆ. ಅನೇಕ ಅಧಿಕಾರಿಗಳು ಸೇರಿ ಜನಪ್ರತಿನಿಧಿಗಳೂ ಸೋಂಕಿನಿಂದಾಗಿ ಕೊನೆಯುಸಿರೆಳೆಯುತ್ತಿದ್ದು, ಇದೀಗ ಸೋಮವಾರಪೇಟೆಯ ಪಟ್ಟಣ ಪಂಚಾಯತಿ ಅಧ್ಯಕ್ಷೆಯನ್ನೂ ಸೋಂಕು ಬಲಿ ಪಡೆದುಕೊಂಡಿದೆ.
ಸೋಮವಾರಪೇಟೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ನಳಿನಿ ಗಣೇಶ್ (57) ಮೃತ ದುರ್ದೈವಿ. ಅವರಿಗೆ ಕೆಲ ದಿನಗಳ ಹಿಂದೆ ಕರೊನಾ ಸೋಂಕು ದೃಢವಾಗಿದ್ದು, ಮಡಿಕೇರಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಅವರು ಬುಧವಾರದಂದು ಕೊನೆಯುಸಿರೆಳೆದಿದ್ದಾರೆ.
ನಳಿನಿ ಅವರು ಪಟ್ಟಣ ಪಂಚಾಯತಿಗೆ ಹಲವು ಬಾರಿ ಸದಸ್ಯೆಯಾಗಿ ಚುನಾಯಿತರಾಗಿದ್ದರು. ಕಳೆದ ನವೆಂಬರ್ನಲ್ಲಿ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ಸ್ವೀಕರಿಸಿದ ಆರೇ ತಿಂಗಳಿಗೆ ಅವರ ಬದುಕು ಕೊನೆಯಾಗಿದೆ.