

Sub Inspector : ರಾಜಸ್ಥಾನದ ಪೊಲೀಸ್ ಅಕಾಡೆಮಿಯಲ್ಲಿ ಎರಡು ವರ್ಷಗಳ ಕಾಲ ಸಬ್ ಇನ್ಸ್ಪೆಕ್ಟರ್ ಆಗಿ ನಟಿಸಿದ ಮಹಿಳೆಯೊಬ್ಬಳು ಕೊನೆಗೂ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾಳೆ.
ಬಂಧಿತಳನ್ನು ಮೋನಾ ಬುಗಾಲಿಯಾ ಎಂದು ಗುರುತಿಸಲಾಗಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಬಳಿಕ, ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸಾರ್ವಜನಿಕರ ಮುಂದೆ ಮೋನಾ ಸಬ್ ಇನ್ಸ್ಪೆಕ್ಟರ್ ಆಗಿ ನಟಿಸಿದ್ದಾಳೆ. ಅಚ್ಚರಿಯ ಸಂಗತಿ ಏನೆಂದರೆ, ಈಕೆ ಪೊಲೀಸ್ ಅಧಿಕಾರಿಗಳ ಪಾರ್ಟಿಗಳು ಮತ್ತು ಸಮಾರಂಭಗಳಿಗೂ ಹಾಜರಾಗುತ್ತಿದ್ದಳು. ಉನ್ನತ ಅಧಿಕಾರಿಗಳೊಂದಿಗೆ ಫೋಟೋಗಳನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಳು.
ಸುಮಾರು ಎರಡು ವರ್ಷಗಳ ಕಾಲ ಪೊಲೀಸರು ಮತ್ತು ಸ್ಥಳೀಯರನ್ನು ವಂಚಿಸಿದ್ದಾಳೆ. 2023ರಲ್ಲಿ ಆಕೆಯ ಹಗರಣ ಬಹಿರಂಗವಾದಾಗ, ಅಂದಿನಿಂದ ತಲೆಮರೆಸಿಕೊಂಡಿದ್ದಳು. ಎರಡು ವರ್ಷಗಳ ಬಳಿಕ ರಾಜಸ್ಥಾನದ ಸಿಕಾರ್ನಲ್ಲಿ ಮೋನಾಳನ್ನು ಬಂಧಿಸಲಾಗಿದೆ.
ಆರೋಪಿ ಮೋನಾ, ರಾಜಸ್ಥಾನದ ನಾಗೌರ್ ಮೂಲದವಳು. ಅವರ ತಂದೆ ಟ್ರಕ್ ಚಾಲಕ. ಪೊಲೀಸ್ ಹುದ್ದೆಗೆ ಸೇರುವುದು ಆಕೆಯ ದೊಡ್ಡ ಕನಸಾಗಿತ್ತು. ಆದರೆ, 2021 ರಲ್ಲಿ ಅರ್ಹತಾ ಪರೀಕ್ಷೆಯಲ್ಲಿ ಆಕೆ ಅನುತ್ತೀರ್ಣಳಾದಳು. ನಂತರ, 'ಮೂಲಿ ದೇವಿ' ಎಂಬ ಹೆಸರಿನಲ್ಲಿ ನಕಲಿ ಹೆಸರಿನಲ್ಲಿ ದಾಖಲೆಗಳನ್ನು ರಚಿಸಿ, ಸಬ್-ಇನ್ಸ್ಪೆಕ್ಟರ್ ಆಗಿ ಆಯ್ಕೆಯಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶವನ್ನು ಹಂಚಿಕೊಂಡಳು. ಅಲ್ಲದೆ, ಪೊಲೀಸ್ ಸಮವಸ್ತ್ರ ಧರಿಸಿ ತಿರುಗಾಡುತ್ತಿದ್ದಳು.
ಮೋನಾ ಕೆಲವು ಪೊಲೀಸ್ ವ್ಯಾಟ್ಸ್ಆ್ಯಪ್ ಗ್ರೂಪ್ ಸೇರಿಕೊಂಡ, ಅನೇಕ ಜನರೊಂದಿಗೆ ಸಂವಹನ ಸಹ ನಡೆಸಿದ್ದಾಳೆ. ಈ ವೇಳೆ ಯಾರಿಗೂ ಆಕೆಯ ಬಗ್ಗೆ ಅನುಮಾನ ಮೂಡಲಿಲ್ಲ. ಆಕೆ ಸಮವಸ್ತ್ರದಲ್ಲಿ ಪರೇಡ್ ಮೈದಾನಕ್ಕೆ ಬಂದು ಪಡೆಯ ಹೊಸ ಸದಸ್ಯರೊಂದಿಗೆ ಪರಿಚಯ ಮಾಡಿಕೊಂಡಳು. ಕೆಲವು ತರಬೇತಿ ಸಬ್-ಇನ್ಸ್ಪೆಕ್ಟರ್ಗಳು ಮೋನಾಳ ಗುರುತಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ ಆಕೆಯ ಸುಳ್ಳು ಬಯಲಾಯಿತು.
ತರಬೇತಿ ಸಬ್-ಇನ್ಸ್ಪೆಕ್ಟರ್ಗಳು ಮೋನಾಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ವಿಚಾರ ಗೊತ್ತಾದ ಕೂಡಲೇ ಮೋನಾ ತಲೆಮರೆಸಿಕೊಂಡಳು. ಇದೀಗ ಆಕೆಯ ಬಂಧನವಾಗಿದೆ. ಪೊಲೀಸರು ಮೋನಾ ವಾಸಿಸುತ್ತಿದ್ದ ಬಾಡಿಗೆ ಕೊಠಡಿಯನ್ನು ಶೋಧಿಸಿದಾಗ ಅಲ್ಲಿ ರಾಜಸ್ಥಾನ ಪೊಲೀಸ್ ಇಲಾಖೆಯ ವಿಶೇಷ ಪೊಲೀಸ್ ಸಮವಸ್ತ್ರಗಳು ಮತ್ತು ಪರೀಕ್ಷಾ ಪತ್ರಿಕೆಗಳು ಹಾಗೂ 7 ಲಕ್ಷ ರೂ. ಪತ್ತೆಯಾಗಿವೆ. (ಏಜೆನ್ಸೀಸ್)