ಟ್ರಂಪ್​ಗೆ ಟಕ್ಕರ್: ಅಮೆರಿಕ ಪಾರ್ಟಿ ಹೆಸರಲ್ಲಿ ಹೊಸ ಪಕ್ಷ ರಚಿಸುವುದಾಗಿ ಎಲಾನ್​ ಮಸ್ಕ್​ ಘೋಷಣೆ! Elon Musk

Elon Musk
Published on

Elon Musk : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಿಂದ ಹೊರಬಂದಿರುವ​ ವಿಶ್ವದ ನಂ.1 ಶ್ರೀಮಂತ ಉದ್ಯಮಿ ಹಾಗೂ ತಂತ್ರಜ್ಞಾನದ ದೊರೆ ಎಲಾನ್ ಮಸ್ಕ್ "ಅಮೆರಿಕ ಪಾರ್ಟಿ" ಹೆಸರಿನಲ್ಲಿ ಹೊಸ ರಾಜಕೀಯ ಪಕ್ಷವನ್ನು ರಚಿಸುವುದಾಗಿ ತಮ್ಮ ಎಕ್ಸ್​ ಖಾತೆಯಲ್ಲಿ ಶನಿವಾರ (ಜುಲೈ 05) ಘೋಷಿಸಿದ್ದಾರೆ.

ಎಲಾನ್​ ಮಸ್ಕ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮನಸ್ತಾಪ ಮೂಡಿದ್ದು, ಇಬ್ಬರು ಸಾರ್ವಜನಿಕವಾಗಿ ಪರಸ್ಪರ ಟೀಕೆಗಳಲ್ಲಿ ತೊಡಗಿದ್ದಾರೆ. ಇದರ ನಡುವೆಯೇ ಟ್ರಂಪ್​ಗೆ ಟಕ್ಕರ್​ ಕೊಡಲು ಮಸ್ಕ್​​ ಹೊಸ ಪಕ್ಷ ರಚನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಅಂದಹಾಗೆ ಮಸ್ಕ್ ಅವರು ಟ್ರಂಪ್​​ ಆಡಳಿತ ಮತ್ತು ಈಗ ಜಾರಿಯಲ್ಲಿರದ ಅಥವಾ ಕಾರ್ಯನಿರ್ವಹಿಸದ ಸರ್ಕಾರಿ ದಕ್ಷತೆ ಇಲಾಖೆ (DOGE) ಎರಡರಿಂದಲೂ ನಿರ್ಗಮಿಸಿದ್ದಾರೆ. ಸರ್ಕಾರದ ವೆಚ್ಚವನ್ನು ಕಡಿತಗೊಳಿಸಲು ಮತ್ತು ಸರ್ಕಾರಿ ಉದ್ಯೋಗಗಳನ್ನು ಕಡಿತಗೊಳಿಸಲು ಟ್ರಂಪ್​ ಈ ಇಲಾಖೆಯನ್ನು ರಚನೆ ಮಾಡಿದ್ದರು. ಇದರ ಮುಖ್ಯಸ್ಥರನ್ನಾಗಿ ಎಲಾನ್​ ಮಸ್ಕ್​ ಅವರನ್ನು ನೇಮಿಸಲಾಗಿತ್ತು. ಈ ಇಲಾಖೆ ತೆಗೆದುಕೊಂಡು ಸಾಕಷ್ಟು ಕ್ರಮಗಳು ವಿವಾದಕ್ಕೂ ಗುರಿಯಾಯಿತು.

ನಮ್ಮ ದೇಶವನ್ನು ವ್ಯರ್ಥ ಮತ್ತು ಭ್ರಷ್ಟಾಚಾರದಿಂದ ದಿವಾಳಿ ಮಾಡುವ ವಿಷಯ ಬಂದಾಗ, ನಾವು ಪ್ರಜಾಪ್ರಭುತ್ವದಲ್ಲಲ್ಲ, ಏಕಪಕ್ಷೀಯ ವ್ಯವಸ್ಥೆಯಲ್ಲಿ ವಾಸಿಸುತ್ತಿದ್ದೇವೆ ಎಂದು ಹೇಳುವ ಮೂಲಕ ಮಸ್ಕ್ ತಮ್ಮ ಪ್ರಕಟಣೆಯಲ್ಲಿ ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ, ಮತ್ತೊಂದು ಪೋಸ್ಟ್‌ನಲ್ಲಿ, ಮಸ್ಕ್ ಅವರು "ಏಕಪಕ್ಷ" ವ್ಯವಸ್ಥೆ ಎಂದು ಕರೆಯುವ ಅಮೆರಿಕದ ರಾಜಕೀಯ ವ್ಯವಸ್ಥೆಗೆ ಹೇಗೆ ಸವಾಲು ಹಾಕಬಹುದು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ನಾವು ಏಕಪಕ್ಷ ವ್ಯವಸ್ಥೆಯನ್ನು ಭೇದಿಸಲು ಹೊರಟಿರುವ ಮಾರ್ಗವೆಂದರೆ, ಲ್ಯೂಕ್ರಾದಲ್ಲಿ ಸ್ಪಾರ್ಟನ್ನರ ಅಜೇಯತೆಯ ಪುರಾಣವನ್ನು ಎಪಾಮಿನೊಂಡಾಸ್ ಹೇಗೆ ಛಿದ್ರಗೊಳಿಸಿದರು ಎಂಬುದರ ಒಂದು ರೂಪಾಂತರವನ್ನು ಬಳಸುವುದಾಗಿದೆ ಅಂದರೆ, ಯುದ್ಧಭೂಮಿಯಲ್ಲಿ ನಿಖರವಾದ ಸ್ಥಳದಲ್ಲಿ ಅತ್ಯಂತ ಕೇಂದ್ರೀಕೃತ ಬಲ ಎಂದು ಮಸ್ಕ್​ ವಿವರಿಸಿದರು.

ಅಂದಹಾಗೆ, ಜುಲೈ 4 ರಂದು ನಡೆದ ಯುಎಸ್ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಮಸ್ಕ್ ತಮ್ಮ ಎಕ್ಸ್​ ಖಾತೆಯಲ್ಲಿ ಒಂದು ಸಮೀಕ್ಷೆಯನ್ನು ಪೋಸ್ಟ್ ಮಾಡಿ, ನೀವು ಎರಡು-ಪಕ್ಷ (ಕೆಲವರು ಏಕಪಕ್ಷೀಯ ಎಂದು ಹೇಳುತ್ತಾರೆ) ವ್ಯವಸ್ಥೆಯಿಂದ ಸ್ವಾತಂತ್ರ್ಯವನ್ನು ಬಯಸುತ್ತೀರಾ ಎಂದು ಕೇಳಲು ಸ್ವಾತಂತ್ರ್ಯ ದಿನವು ಸೂಕ್ತ ಸಮಯ! ನಾವು ಅಮೆರಿಕ ಪಕ್ಷವನ್ನು ರಚಿಸಬೇಕೇ? ಎಂದು ಫಾಲೋವರ್ಸ್​ ಅನ್ನು ಕೇಳಿದ್ದರು. ಇದಕ್ಕೆ ಶೇ. 65.4 ರಷ್ಟು ಫಾಲೋವರ್ಸ್​ "ಹೌದು" ಎಂದು ಮತ ಚಲಾಯಿಸಿದರೆ, ಶೇ. 34.6 ರಷ್ಟು ಫಾಲೋವರ್ಸ್​ ಮಾತ್ರ "ಇಲ್ಲ" ಎಂದು ಮತ ಚಲಾಯಿಸಿದರು. ಈ ಬಲವಾದ ಬೆಂಬಲವನ್ನು ಪಕ್ಷ ರಚನೆ ನಿರ್ಧಾರ ಹಿಂದಿನ ಪ್ರೇರಕ ಶಕ್ತಿ ಎಂದು ಮಸ್ಕ್ ಉಲ್ಲೇಖಿಸಿದರು.

ಇತ್ತೀಚಿನ ವಾರಗಳಲ್ಲಿ ಮಸ್ಕ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಉದ್ವಿಗ್ನತೆ ತೀವ್ರಗೊಂಡಿದೆ. ಟ್ರಂಪ್ ಅವರ "ಒನ್ ಬಿಗ್ ಬ್ಯೂಟಿಫುಲ್ ಬಿಲ್" ಎಂದು ಕರೆಯಲ್ಪಡುವ ಹೊಸ ಶಾಸನವು ಕಾಂಗ್ರೆಸ್​ನ ಎರಡೂ ಸದನಗಳನ್ನು ಅಂಗೀಕರಿಸಿ ಜುಲೈ 4 ರಂದು ಕಾನೂನಾಗಿ ಸಹಿ ಹಾಕಲ್ಪಟ್ಟಿತು. ಈ ಬಿಲ್​ ಅನ್ನು ಮಸ್ಕ್​ ಟೀಕಿಸಿದ್ದಾರೆ. ಈ ಹಿಂದೆ ಪ್ರಮುಖ ಸಲಹಾ ಸಾಮರ್ಥ್ಯದಲ್ಲಿ ಸೇವೆ ಸಲ್ಲಿಸಿದ್ದ ಮತ್ತು ಸರ್ಕಾರಿ ದಕ್ಷತೆ ಇಲಾಖೆಯ ಮೂಲಕ ವೆಚ್ಚ ಕಡಿತ ಪ್ರಯತ್ನಗಳನ್ನು ಮುನ್ನಡೆಸಿದ್ದ ಮಸ್ಕ್, ಟ್ರಂಪ್ ಅವರ ತೆರಿಗೆ ಮತ್ತು ಖರ್ಚು ಮಸೂದೆಯು ಮುಂದಿನ ಹತ್ತು ವರ್ಷಗಳಲ್ಲಿ ರಾಷ್ಟ್ರೀಯ ಸಾಲಕ್ಕೆ 3.3 ಟ್ರಿಲಿಯನ್ ಡಾಲರ್‌ಗಳನ್ನು ಸೇರಿಸುವ ಸಾಧ್ಯತೆ ಇದೆ ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net