ನವದೆಹಲಿ: ದೇಶದ ವೈದ್ಯಕೀಯ ಶಿಕ್ಷಣ ಕ್ಷೇತ್ರದ ಇತಿಹಾಸದಲ್ಲೇ ಅತ್ಯಂತ ದೊಡ್ಡದೆನ್ನಲಾದ ಹಗರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (ಸಿಬಿಐ), ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಪ್ರಕರಣಗಳಲ್ಲಿ ಹಲವು ಶಿಕ್ಷಣ ತಜ್ಞರು, ಹಿರಿಯ ಅಧಿಕಾರಿಗಳು, ಮಧ್ಯವರ್ತಿಗಳು ಮಾತ್ರವಲ್ಲದೆ ಒಬ್ಬ ಧಾರ್ವಿುಕ ನಾಯಕ ಕೂಡ ಭಾಗಿಯಾಗಿರುವ ಮೇಲೆ ಬೆಳಕು ಚೆಲ್ಲಿದೆ.
ಭಾರತೀಯ ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಕೊಳೆತು ನಾರುತ್ತಿರುವುದನ್ನು ಬಯಲಿಗೆಳೆದಿರುವ ಸಿಬಿಐ, 35 ವ್ಯಕ್ತಿಗಳ ವಿರುದ್ಧ ದಾಖಲಿಸಿರುವ ಎಫ್ಐಆರ್ನಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಮಾಜಿ ಅಧ್ಯಕ್ಷ ಹಾಗೂ ಟಿಐಎಸ್ಎಸ್ನ ಹಾಲಿ ಕುಲಪತಿ ಡಿ.ಪಿ. ಸಿಂಗ್, ಧಾರ್ವಿುಕ ನಾಯಕ ರಾವತ್ಪುರ ಸರ್ಕಾರ್ ಮತ್ತು ಮಧ್ಯಪ್ರದೇಶದ ಇಂದೋರ್ನ ಇಂಡೆಕ್ಸ್ ಮೆಡಿಕಲ್ ಕಾಲೇಜ್ನ ಸುರೇಶ್ ಸಿಂಗ್ ಭದೋರಿಯಾ ಇತರರ ಹೆಸರುಗಳೂ ನಮೂದಾಗಿವೆ.
ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (ರೇರಾ) ಮಾಜಿ ಅಧ್ಯಕ್ಷ ಹಾಗೂ ನಿವೖತ್ತ ಐಎಫ್ಎಸ್ ಅಧಿಕಾರಿ ಸಂಜಯ್ ಶುಕ್ಲಾ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದಾರೆ. ಅವರು ರಾವತ್ಪುರ ಶಿಕ್ಷಣ ಸಮೂಹದ ಒಬ್ಬ ಟ್ರಸ್ಟಿಯೂ ಆಗಿದ್ದಾರೆ. ಆದರೆ, ಇದುವರೆಗೆ ಸಮೂಹದ ನಿರ್ದೇಶಕ ಅತುಲ್ ತಿವಾರಿಯನ್ನು ಮಾತ್ರ ಹಗರಣದ ಸಂಬಂಧ ಬಂಧಿಸಲಾಗಿದೆ. ಗೀತಾಂಜಲಿ ಯುನಿವರ್ಸಿಟಿಯ ರಿಜಿಸ್ಟ್ರಾರ್ ಮಯೂರ್ ರಾವಲ್ ಕೂಡ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ರಾಜಸ್ಥಾನ ಗುರುಗ್ರಾಮ ಮತ್ತು ಇಂದೋರ್ನಿಂದ ವಾರಂಗಲ್ ಮತ್ತು ವಿಶಾಖಪಟ್ಟಣದವರೆಗೆ ವೈದ್ಯ ಶಿಕ್ಷಣ ಕ್ಷೇತ್ರದ ಅಕ್ರಮ ಜಾಲ ಹರಡಿದೆ. ಹವಾಲಾ ಮತ್ತು ಬ್ಯಾಂಕಿಂಗ್ ಮಾರ್ಗಗಳ ಮೂಲಕ ಕೋಟ್ಯಂತರ ರೂಪಾಯಿ ಹಣ ಕೈ ಬದಲಾಗಿರುವುದು ತನಿಖೆಯಿಂದ ದೖಢಪಟ್ಟಿದೆ.
ಎನ್ಎಂಸಿ ಅಧಿಕಾರಿಗಳು
ಭ್ರಷ್ಟಾಚಾರದಲ್ಲಿ ಎನ್ಎಂಸಿ ಅಧಿಕಾರಿಗಳ ಪಾತ್ರದ ಆಯಾಮದ ತನಿಖೆಯ ಭಾಗವಾಗಿ ಸಿಬಿಐ ಅಧಿಕಾರಿಗಳು ತೆಲಂಗಾಣದ ವಾರಂಗಲ್ನ ಫಾದರ್ ಕೊಲಂಬೋ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಟ್ರಸ್ಟಿ ಜೋಸೆಫ್ ಕೋಮರೆಡ್ಡಿ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಆರು ಜನರನ್ನು ಬಂಧಿಸಲಾಗಿದೆ. ಕಾಲೇಜ್ ಪರವಾಗಿ ಅನುಕೂಲಕರ ವರದಿ ಪಡೆಯಲು ತಪಾಸಣಾ ತಂಡಗಳ ಸದಸ್ಯರಿಗೆ ಕೋಮರೆಡ್ಡಿ ಭಾರಿ ಲಂಚ ನೀಡಿದ್ದರು ಎಂದು ಎಫ್ಐಆರ್ನಲ್ಲಿ ಸಿಬಿಐ ಆರೋಪಿಸಿದೆ.
870 ಫಾರ್ವ ಕಾಲೇಜುಗಳಿಗೆ 13 ದಿನಗಳಲ್ಲಿ ಅನುಮೋದನೆ
ದೇಶಾದ್ಯಂತ 2023-24ರ ಅವಧಿಯಲ್ಲಿ 870 ಫಾರ್ಮಸಿ ಕಾಲೇಜುಗಳಿಗೆ ಕೇವಲ 13 ದಿನಗಳಲ್ಲಿ ಅನುಮೋದನೆ ನೀಡಲಾಗಿದೆ ಎಂಬುದು ಸಿಬಿಐ ತನಿಖೆಯಿಂದ ಬೆಳಕಿಗೆ ಬಂದಿದೆ. ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ)ದ ಅಧ್ಯಕ್ಷ ಡಾ. ಮೋಂಟು ಕುಮಾರ್ ಪಟೇಲ್ ಕೇವಲ 7ರಿಂದ 8 ನಿಮಿಷಗಳ ವಿಡಿಯೋ ಕಾಲ್ನಲ್ಲಿ ಅನುಮೋದನೆ ನೀಡಿದ್ದಾರೆ ಎಂಬ ಆರೋಪದ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ.
ಪ್ರಾಥಮಿಕ ತನಿಖೆ ವೇಳೆ ಕಾಲೇಜು ಸ್ಥಾಪಿಸಲು ಸ್ಥಳ ಪರಿಶೀಲಿಸುವ ಪ್ರಕ್ರಿಯೆಯನ್ನು ಆನ್ಲೈನ್ಗೆ ಬದಲಿಸಲಾಗಿತ್ತು. ಹೊಸ ಕಾಲೇಜುಗಳ ಸ್ಥಾಪನೆಗೆ ಆನ್ಲೈನ್ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ 870 ಕಾಲೇಜುಗಳನ್ನು ಪರಿಶೀಲನೆಗಾಗಿ ಶಾರ್ಟ್ಲಿಸ್ಟ್ ಮಾಡಲಾಗಿತ್ತು. ಇದರಲ್ಲಿ ಹಲವು ಕಾಲೇಜುಗಳಿಗೆ ಕೆಲವೇ ನಿಮಿಷಗಳ ಆನ್ಲೈನ್ ತಪಾಸಣೆ ಮೂಲಕ ಅನುಮೋದನೆ ನೀಡಲಾಗಿತ್ತು. ಹೀಗೆ ಅನುಮೋದನೆ ಪಡೆದ ಹಲವು ಕಾಲೇಜುಗಳಲ್ಲಿ ಅಗತ್ಯ ಕಟ್ಟಡಗಳು, ಮೂಲಸೌಕರ್ಯಗಳು ಮತ್ತು ನುರಿತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಕೊರತೆ ಇತ್ತು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಸಿಬಿಐ ಅಧಿಕಾರಿಗಳ ಪರಿಶೀಲನೆ ವೇಳೆಯಲ್ಲೂ ಹಲವು ದಾಖಲೆಗಳು, ವಿಡಿಯೋ ರೆಕಾರ್ಡಿಂಗ್ಗಳು ಕಾಣೆಯಾಗಿರುವುದು ಕಂಡು ಬಂದಿದೆ.
ಈ ಹಿಂದೆಯೂ ಮೋಂಟು ಕುಮಾರ್ ಪಟೇಲ್ ಅಧಿಕಾರ ದುರುಪಯೋಗ ಪಡಿಸಿದ್ದರು. ಪಿಸಿಐ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಮತದಾರರಿಗಾಗಿ ದೆಹಲಿಯಲ್ಲಿ 2.7 ಲಕ್ಷ ರೂ. ಬಾಡಿಗೆಯ ರೂಮ್ಳನ್ನು ಬುಕ್ ಮಾಡಿದ್ದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ತಮ್ಮ ಬೆಂಬಲಿಗರನ್ನು ಪಿಸಿಐನ ಆಯಕಟ್ಟಿನ ಜಾಗಗಳಲ್ಲಿ ನೇಮಿಸಿದ್ದರು ಎಂಬ ಆರೋಪವೂ ಇದ್ದು. ಈ ಕುರಿತೂ ಸಿಬಿಐ ತನಿಖೆ ನಡೆಸುತ್ತಿದೆ.
ವ್ಯಾಪಕ ಜಾಲದಲ್ಲಿ ಕೇಂದ್ರದ ಹಲವು ಅಧಿಕಾರಿಗಳು ಭಾಗಿ
ಕೇಂದ್ರ ಆರೋಗ್ಯ ಸಚಿವಾಲಯ, ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್ಎಂಸಿ) ಅಧಿಕಾರಿಗಳು ಕೂಡ ಹಗರಣಗಳಲ್ಲಿ ಶಾಮೀಲಾಗಿರುವುದು ತಿಳಿದು ಬಂದಿದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಒಬ್ಬ, ಸಚಿವಾಲಯದ ಎಂಟು ಅಧಿಕಾರಿಗಳು ಮತ್ತು ಎನ್ಎಂಸಿ ತಪಾಸಣಾ ತಂಡಗಳ ಭಾಗವಾಗಿದ್ದ ಐದು ವೈದ್ಯರು ಕೂಡ ಹಗರಣದಲ್ಲಿ ಒಳಗೊಂಡಿದ್ದಾರೆ. ಕಳಪೆ ವೈದ್ಯಕೀಯ ಕಾಲೇಜ್ಗಳಿಗೆ ಅಕ್ರಮವಾಗಿ ಅನುಮೋದನೆ ಪಡೆಯಲು ಲಂಚ ಸ್ವೀಕಾರ ಸೇರಿದಂತೆ ಹಲವು ಅವ್ಯವಹಾರಗಳಲ್ಲಿ ಇವರೆಲ್ಲರೂ ಭಾಗಿಯಾಗಿದ್ದಾರೆ.