

Dhanashree Verma : ಕಳೆದ ಕೆಲವು ದಿನಗಳಿಂದ ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಹಾಗೂ ಅವರ ಪತ್ನಿ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಧನಶ್ರೀ ವರ್ಮಾ ವಿಚ್ಛೇದನದ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸದ್ಯದ ಮಾಹಿತಿ ಪ್ರಕಾರ ಈ ಜೋಡಿ ಸದ್ಯದಲ್ಲೇ ವಿಚ್ಛೇದನ ಪಡೆಯಲಿದೆಯಂತೆ. ಆದರೆ, ಈ ಸುದ್ದಿಗೆ ಚಾಹಲ್ ಆಗಲಿ ಧನಶ್ರೀ ಆಗಲಿ ಇದುವರೆಗೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಆದರೂ ಇಬ್ಬರ ನಡೆ ಸಾಕಷ್ಟು ಅನುಮಾಗಳಿಗೆ ಎಡೆಮಾಡಿಕೊಟ್ಟಿದೆ.
ಚಾಹಲ್ ಮತ್ತು ಧನಶ್ರೀ ಇನ್ಸ್ಟಾಗ್ರಾಮ್ನಲ್ಲಿ ಒಬ್ಬರನ್ನೊಬ್ಬರು ಅನ್ಫಾಲೋ ಮಾಡಿದ್ದಾರೆ. ಚಾಹಲ್ ಅವರು ತಮ್ಮ ಪತ್ನಿಯೊಂದಿಗಿನ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಅಲ್ಲದೆ, ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದ ಮಾರ್ಮಿಕ ಪೋಸ್ಟ್ ಕೂಡ ವಿಚ್ಛೇದನ ಸುದ್ದಿಗೆ ಇನ್ನಷ್ಟು ಪುಷ್ಠಿ ನೀಡಿದೆ. ಕಠಿಣ ಪರಿಶ್ರಮವು ವ್ಯಕ್ತಿಯ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ನಿಮ್ಮ ಜೀವನದ ಪ್ರಯಾಣ ನಿಮಗೆ ಮಾತ್ರ ಗೊತ್ತಿದೆ. ನಿನ್ನ ನೋವು ನಿನಗೆ ತಿಳಿದಿರುತ್ತದೆ. ಈ ಹಂತಕ್ಕೆ ತಲುಪಲು ನೀವು ಏನೆಲ್ಲ ಮಾಡಿದ್ದೀರಿ ಎಂಬುದು ನಿಮಗೆ ಮಾತ್ರ ಗೊತ್ತಿರುತ್ತದೆ. ನೀವೀಗ ಎತ್ತರದಲ್ಲಿದ್ದೀರಿ. ನಿಮ್ಮ ತಂದೆ-ತಾಯಿ ಹೆಮ್ಮೆ ಪಡುವಂತೆ ಶ್ರಮಿಸಿದ್ದೀರಿ. ಹೆಮ್ಮೆಯ ಮಗನಂತೆ ಯಾವಾಗಲೂ ಉಳಿಯಿರಿ ಎಂದು ಯಜುವೇಂದ್ರ ಚಾಹಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದರೆ, ವೈವಾಹಿಕ ಜೀವನದಲ್ಲಿ ಬಿರುಕು ಮೂಡಿರುವುದು ಸ್ಪಷ್ಟವಾಗುತ್ತದೆ.
ಈ ಎಲ್ಲ ಬೆಳವಣಿಗೆ ನಡುವೆ ಧನಶ್ರೀಗೆ ಸಂಬಂಧಿಸಿದ ಕೆಲವೊಂದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಚಾಹಲ್ ಮತ್ತು ಧನಶ್ರೀ ಸಂಬಂಧದಲ್ಲಿ ಬಿರುಕು ಮೂಡಲು ಇದೇ ಕಾರಣ ಎನ್ನಲಾಗುತ್ತಿದೆ. ಧನಶ್ರೀ ಅವರ ವಿವಾಹೇತರ ಸಂಬಂಧವೇ ವಿಚ್ಛೇದನಕ್ಕೆ ಕಾರಣ ಎನ್ನುತ್ತಿರುವ ಕೆಲ ನೆಟ್ಟಿಗರು, ಅದಕ್ಕೆ ಪುಷ್ಟಿ ನೀಡುವಂತಹ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇನ್ನು ಈ ವದಂತಿಗಳ ನಡುವೆ ನೃತ್ಯ ನಿರ್ದೇಶಕ ಪ್ರತೀಕ್ ಉಟೇಕರ್ ಅವರೊಂದಿಗೆ ಧನಶ್ರೀ ಇರುವ ಫೋಟೋ ಕೂಡ ವೈರಲ್ ಆಗುತ್ತಿದೆ. ಝಲಕ್ ದಿಖ್ಲಾ ಜಾ ಶೋ ನಂತರದ ಪಾರ್ಟಿಯ ಸಮಯದಲ್ಲಿ ತೆಗೆದ ಫೋಟೋದಲ್ಲಿ ಪ್ರತೀಕ್ ಮತ್ತು ಧನಶ್ರೀ ಕಪ್ಪು ಬಣ್ಣದ ಮ್ಯಾಚಿಂಗ್ ಬಟ್ಟೆಗಳನ್ನು ಧರಿಸಿದ್ದಾರೆ. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಇದೇ ಚಾಹಲ್ ಜತೆಗಿನ ವಿಭಜನೆಗೆ ಕಾರಣವಾಗಿರಬಹುದು ಎಂಬ ಊಹಾಪೋಹಗಳು ಕೂಡ ಹರಡಿವೆ.
ವೈವಾಹಿಕ ಜೀವನದ ವಿಚಾರದಲ್ಲಿ ಇಷ್ಟೆಲ್ಲ ವದಂತಿ ಮತ್ತು ಊಹಾಪೋಹಗಳು ಹರಿದಾಡುತ್ತಿದ್ದರೂ ಚಾಹಲ್ ಆಗಲಿ ಧನಶ್ರೀಯಾಗಲಿ ಸ್ಪಷ್ಟನೆ ನೀಡುವ ಗೋಜಿಗೆ ಹೋಗಿಲ್ಲ. ಚಾಹಲ್ ಅವರು ಇನ್ಸ್ಟಾಗ್ರಾಂನಲ್ಲಿ ಪ್ರತಿನಿತ್ಯ ಮಾರ್ಮಿಕವಾಗಿ ಪೋಸ್ಟ್ ಹಾಕುತ್ತಿದ್ದಾರೆ ಹೊರತು ಈ ವಿಚಾರದ ಬಗ್ಗೆ ನೇರವಾಗಿ ಏನೂ ಹೇಳುತ್ತಿಲ್ಲ. ಹೀಗಾಗಿ ವದಂತಿಗಳಿಗೆ ನಿತ್ಯವೂ ಇನ್ನಷ್ಟು ರೆಕ್ಕೆಪುಕ್ಕಗಳು ಸೇರಿಕೊಳ್ಳುತ್ತಿವೆ. ಇದರ ನಡುವೆ ಚಾಹಲ್ ಕೂಡ ಬೇರೊಂದು ಯುವತಿಯ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಕೂಡ ಹರಡಿದೆ. ಈ ಪ್ರಕರಣದಲ್ಲಿ ಇನ್ನು ಏನೆಲ್ಲ ಬೆಳವಣಿಗೆ ನಡೆಯುತ್ತದೆಯೋ ಕಾದು ನೋಡಬೇಕಿದೆ. ಇನ್ನಷ್ಟು ವದಂತಿಗಳು ಹರಡಬಾರದು ಅಂದರೆ, ಧನಶ್ರೀ ಹಾಗೂ ಚಾಹಲ್ ಅವರು ಆದಷ್ಟು ಬೇಗ ಒಂದು ಸ್ಪಷ್ಟನೆ ನೀಡಬೇಕಿದೆ.
ಅಂದಹಾಗೆ 2020ರ ಡಿಸೆಂಬರ್ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಾಹಲ್ ಮತ್ತು ಧನಶ್ರೀ ತಮ್ಮ ಸಿಹಿ ಕ್ಷಣಗಳನ್ನು ಆಗಾಗ ತಮ್ಮ ಅಭಿಮಾನಿಗಳೊಂದಿಗೆ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಿದ್ದರು. ಒಂದು ಸಮಯದಲ್ಲಿ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದ್ದ ಈ ಜೋಡಿ ಇದೀಗ ಬೇರೆಯಾಗುತ್ತಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಶೀಘ್ರದಲ್ಲೇ ಇಬ್ಬರು ತಮ್ಮ ವಿಚ್ಛೇದನವನ್ನು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಗಳಿವೆ.
ಅಂದಹಾಗೆ ಟೀಮ್ ಇಂಡಿಯಾದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಮೊಹಮ್ಮದ್ ಶಮಿಯಂತಹ ಕ್ರಿಕೆಟಿಗರು ಇಂತಹ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇದೀಗ ವಿಚ್ಛೇದನ ಪಡೆದರೆ ಚಾಹಲ್ ಕೂಡ ಆ ಪಟ್ಟಿಗೆ ಸೇರಲಿದ್ದಾರೆ. ಒಟ್ಟಿನಲ್ಲಿ ವೈಯಕ್ತಿಕ ಸಮಸ್ಯೆಗಳು ಚಾಹಲ್ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಸದ್ಯದಲ್ಲೇ ದಂಪತಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. (ಏಜೆನ್ಸೀಸ್)