

Social Media Influencer : ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಲು ಕೆಲವರು ನಾನಾ ಪ್ರಯತ್ನಗಳನ್ನು ಮಾಡುವುದನ್ನು ಮತ್ತು ಅದಕ್ಕಾಗಿ ಹಲವಾರು ಸಾಹಸಗಳನ್ನು ಮಾಡುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಅದೇ ರೀತಿ ಇತ್ತೀಚಿಗೆ ಯುವತಿಯೊಬ್ಬಳು ಮಳೆ ನೀರಿನ ಪ್ರವಾಹದಲ್ಲಿ ಹುಚ್ಚುಚ್ಚಾಗಿ ಮಿಂದೆದ್ದಿರುವ ವಿಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಭಾರಿ ಮಳೆಯಾದಂತಹ ಸಂದರ್ಭದಲ್ಲಿ ಹೆಚ್ಚಿನ ಜನರು ಮನೆಯಿಂದ ಹೊರಗೆ ಹೋಗಲು ಹಿಂಜರಿಯುತ್ತಾರೆ. ಆದರೆ, ಕೆಲವು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳು ಸಾರ್ವಜನಿಕರ ಗಮನ ಸೆಳೆಯಲು ಏನು ಬೇಕಾದರೂ ಮಾಡಲು ಹಿಂಜರಿಯುವುದಿಲ್ಲ. ಅಂತಹ ವ್ಯಕ್ತಿಗಳ ಸಾಲಿಗೆ ಸೀಮಾ ಕನೋಜಿಯಾ ಸೇರಿದ್ದಾಳೆ.
ಸೀಮಾ ಓರ್ವ ಮುಂಬೈ ನಿವಾಸಿ. ಇತ್ತೀಚೆಗೆ ಮುಂಬೈನಲ್ಲಿ ಭಾರಿ ಮಳೆಯಾಯಿತು. ಈ ಸಂದರ್ಭದಲ್ಲಿ ರಸ್ತೆಗಳು ಜಲಾವೃತಗೊಂಡು ಕೆಸರುಮಯವಾಗಿತ್ತು. ಇದೇ ವೇಳೆ ಸೀಮಾ ಶಾರ್ಟ್ ಧರಿಸಿ, ಜಲಾವೃತ ರಸ್ತೆಯಲ್ಲಿ ಹುಚ್ಚಾಟ ಮೆರೆದಿದ್ದಾಳೆ. ನೀರಿನಲ್ಲಿ ಉರುಳುತ್ತಾ ನೃತ್ಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಏಳು ದಿನಗಳ ಹಿಂದೆ ಸೀಮಾ ಕನೋಜಿಯಾ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದು, ಈವರೆಗೆ 22 ಮಿಲಿಯನ್ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ಕೆಲವು ನೆಟ್ಟಿಗರು ಮಹಿಳೆಯ ಸೃಜನಶೀಲತೆ ಮತ್ತು ಧೈರ್ಯವನ್ನು ಶ್ಲಾಘಿಸಿದರೆ, ಇನ್ನು ಕೆಲವರು ಸಂಚಾರಕ್ಕೆ ಅಡ್ಡಿಯಾಗುವ ಇಂತಹ ವರ್ತನೆಗಳನ್ನು ಸಹಿಸಲಾಗದು ಮತ್ತು ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ವೈರಲ್ ಆಗುವುದು ಯಶಸ್ಸಿನ ಹೊಸ ಮಾನದಂಡವಾಗಿದೆ. ಕೆಲವರು ನೈತಿಕತೆ, ನೈರ್ಮಲ್ಯ ಮತ್ತು ಸಾಮಾನ್ಯ ಸಭ್ಯತೆಯನ್ನು ಬಲಿಕೊಟ್ಟು ಇಂತಹ ಕೆಲಸಗಳನ್ನು ಮಾಡುತ್ತಾರೆ ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)