ಕೋವಿಡ್​-19 ಸ್ಕ್ರೀನಿಂಗ್​ಗೆ ಬಂದವು ಸ್ಮಾರ್ಟ್​ ಹೆಲ್ಮೆಟ್​

smart helmet
Published on

ಮುಂಬೈ: ಮಹಾರಾಷ್ಟ್ರದ ಮುಂಬೈ ಕೋವಿಡ್​-19 ಸೋಂಕಿನ ಕೇಂದ್ರ ಬಿಂದು ಆಗಿದೆ. ವಾಣಿಜ್ಯ ರಾಜಧಾನಿಯಲ್ಲಿ ಸಾಮೂಹಿಕವಾಗಿ ಕೋವಿಡ್​-19 ಪರೀಕ್ಷೆ ಮಾಡುವ ಮೂಲಕ ಸೋಂಕು ತಡೆಗಟ್ಟಲು ಸ್ಥಳೀಯ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಸ್ಮಾರ್ಟ್​ ಹೆಲ್ಮೆಟ್​ಗಳು ತುಂಬಾ ಸಹಕಾರಿಯಾಗಿವೆ.

ಕಂಟೇನ್ಮೆಂಟ್​ ವಲಯಗಳಲ್ಲಿ ಮನೆಯಿಂದ ಮನೆಗೆ ತೆರಳಿ ಆರೋಗ್ಯ ಕಾರ್ಯಕರ್ತರು ಸ್ಕ್ರೀನಿಂಗ್​ ಮಾಡುತ್ತಿದ್ದು, ಈ ಕಾರ್ಯದಲ್ಲಿ ಸ್ಮಾರ್ಟ್​ ಹೆಲ್ಮೆಟ್​ ತುಂಬಾ ಸಹಕಾರಿ ಎಂದು ಸಾಬೀತಾಗಿದೆ. ಇವನ್ನು ಬಳಸಿ ಒಂದು ನಿಮಿಷದಲ್ಲಿ 200 ಜನರನ್ನು ಸಾಮೂಹಿಕವಾಗಿ ಸ್ಕ್ರೀನಿಂಗ್​ ಮಾಡಲಾಗುತ್ತಿದೆ.

ಸಾಮೂಹಿಕ ಸ್ಕ್ರೀನಿಂಗ್​ಗಾಗಿ ಬೃಹನ್ಮುಂಬೈ ಮಹಾನಗರಪಾಲಿಕೆ ಅಧಿಕಾರಿಗಳಿಗೆ ನೆರವಾಗುತ್ತಿರುವ ಭಾರತೀಯ ಜೈನ ಸಂಘದ ಸದಸ್ಯ ಡಾ. ನೀಲು ಜೈನ್​ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದು, ಸ್ಮಾರ್ಟ್​ ಹೆಲ್ಮೆಟ್​ಗಳನ್ನು ಬಳಸಿ ಪ್ರತಿದಿನ ತಲಾ 2 ಸಾವಿರ ಜನರನ್ನು ಸ್ಕ್ರೀನಿಂಗ್​ ಮಾಡಲಾಗುತ್ತಿದೆ. ಇದುವರೆಗೆ 15 ಸಾವಿರ ಜನರನ್ನು ಸ್ಕ್ರೀನಿಂಗ್​ಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಮೊದಲ ಬಾರಿಗೆ ಸ್ಕ್ರೀನಿಂಗ್​ ಕಾರ್ಯದಲ್ಲಿ ಸ್ಮಾರ್ಟ್​ ಹೆಲ್ಮೆಟ್​ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಪ್ರತಿಯೊಂದು ಹೆಲ್ಮೆಟ್​ಗೆ 6 ಲಕ್ಷ ರೂ. ಬೆಲೆ ಇದೆ. ಇಂಥ ನಾಲ್ಕು ಹೆಲ್ಮೆಟ್​ಗಳನ್ನು ಮಹಾರಾಷ್ಟ್ರದಲ್ಲಿ ಬಳಸಲಾಗುತ್ತಿದ್ದು, ಎರಡು ಹೆಲ್ಮೆಟ್​ಗಳು ಮುಂಬೈನಲ್ಲಿ ಹಾಗೂ ಇನ್ನೆರಡು ಹೆಲ್ಮೆಟ್​ಗಳು ಪುಣೆಯಲ್ಲಿ ಬಳಕೆಯಲ್ಲಿವೆ. ಭಾರತೀಯ ಜೈನ ಸಂಘ ಈ ಹೆಲ್ಮೆಟ್​ಗಳನ್ನು ಭಾರತಕ್ಕೆ ತಂದಿದ್ದು, ಪ್ರತಿಯೊಂದು ಹೆಲ್ಮೆಟ್​ನಲ್ಲಿ 64 ಜಿಬಿ ಡೇಟಾವನ್ನು ಸಂಗ್ರಹಿಸಿಡಬಹುದಾಗಿದೆ.

ಸ್ಮಾರ್ಟ್​ ಹೆಲ್ಮೆಟ್​ಗಳಲ್ಲಿ ಎರಡು ಕ್ಯಾಮರಾಗಳಿವೆ. ಒಂದು ಕ್ಯಾಮರಾ ಜನರ ವಿಡಿಯೋ ಚಿತ್ರೀಕರಿಸಿದರೆ, ಇನ್ನೊಂದು ಬದಿಯಲ್ಲಿರುವ ಕ್ಯಾಮರಾ ಜನರ ದೇಹದ ತಾಪಮಾನವನ್ನು ಅಳೆದು, ದಾಖಲಿಸಿಕೊಳ್ಳುತ್ತದೆ.

ಸ್ಮಾರ್ಟ್​ ಹೆಲ್ಮೆಟ್​ಗಳು ಸ್ಕ್ರೀನಿಂಗ್​ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತವೆ. ಥರ್ಮಲ್​ ಗನ್​ ಬಳಸಿ ಸ್ಕ್ರೀನಿಂಗ್​ ಮಾಡಿದರೆ ಒಂದು ದಿನದಲ್ಲಿ ಹೆಚ್ಚು ಜನರನ್ನು ಸ್ಕ್ರೀನಿಂಗ್​ಗೆ​ ಒಳಪಡಿಸಲು ಸಾಧ್ಯವಾಗುವುದಿಲ್ಲ. ಯಾವುದಾದರೂ ಒಬ್ಬ ವ್ಯಕ್ತಿಯ ದೇಹದ ತಾಪಮಾನ ನಿಗಿದಿಗಿಂತ ಹೆಚ್ಚಾಗಿರುವುದು ಕಂಡು ಬಂದರೆ, ಅಂಥ ವ್ಯಕ್ತಿಯನ್ನು ಆ ಪ್ರದೇಶದಲ್ಲಿರುವ ಬೃಹನ್ಮುಂಬೈ ಮಹಾನಗರಪಾಲಿಕೆಯ ಶಿಬಿರಕ್ಕೆ ಕಳುಹಿಸಲಾಗುತ್ತದೆ. ಅವರನ್ನು ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಜತೆಗೆ ಪರೀಕ್ಷೆಗೆ ಒಳಪಡಿಸಿದ ವ್ಯಕ್ತಿಯ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಬೃಹನ್ಮುಂಬೈ ಮಹಾನಗರಪಾಲಿಕೆಯ ತಂಡದ ಡಾ. ವಂದನಾ ಹೇಳುತ್ತಾರೆ.

ಸದ್ಯಕ್ಕೆ ಈ ಹೆಲ್ಮೆಟ್​ಗಳನ್ನು ಬಳಸಿ ಮುಂಬೈನ ಉತ್ತರ ಭಾಗದಲ್ಲಿ ಸ್ಕ್ರೀನಿಂಗ್​ ಕಾರ್ಯ ಕೈಗೊಳ್ಳಲಾಗುತ್ತಿದೆ. ಕೆಲದಿನಗಳಿಂದ ಈ ಪ್ರದೇಶ ಹೊಸ ಹಾಟ್​ಸ್ಪಾಟ್​ ಆಗಿ ಹೊಮ್ಮಿರುವುದು ಇದಕ್ಕೆ ಕಾರಣ. ಒಟ್ಟಾರೆ ಹೇಳುವುದಾದರೆ ನಾವು ಪ್ರತಿದಿನ 10 ಬಡಾವಣೆಗಳಲ್ಲಿ ಸ್ಕ್ರೀನಿಂಗ್​ ಕಾರ್ಯ ಕೈಗೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net