

ಬಾಲಿವುಡ್ನ ಅತ್ಯಂತ ವಿವಾದಿತ ವ್ಯಕ್ತಿ ಎಂದರೆ ಕಮಾಲ್ ಆರ್ ಖಾನ್ ಅಲಿಯಾಸ್ ಕೆಆರ್ಕೆ. ಬಾಲಿವುಡ್ ಚಿತ್ರಗಳ ಮತ್ತು ವ್ಯಕ್ತಿಗಳ ಕುರಿತಾದ ಅವರ ವಿಮರ್ಶೆಗಳು ಹರಿತವಷ್ಟೇ ಅಲ್ಲ, ಸಾಕಷ್ಟು ವಿವಾದಗಳಿಗೂ ಈಡಾಗಿವೆ. ಈಗ ಕೆಆರ್ಕೆ, ಬಾಲಿವುಡ್ ಕುರಿತಾದ ಇನ್ನೊಂದು ಸ್ಫೋಟಕ ಮಾಹಿತಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅವರನ್ನು ಯಾರೂ ದೂರ ಮಾಡಲಿಲ್ಲ; ಅವರೇ ದೂರ ಮಾಡಿಕೊಂಡರು …
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರ ಬಾಲಿವುಡ್ನಲ್ಲಿ ಸ್ವಜನಪಕ್ಷಪಾತದ ಕುರಿತಾಗಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಕೆಲವರು ತಮಗೆ ಇಷ್ಟವಾದವರನ್ನು ಮೇಲಕ್ಕೆತ್ತಲು ಹಲವರನ್ನು ತುಳಿಯುತ್ತಿದ್ದಾರೆ ಮತ್ತು ಸುಶಾಂತ್ ಸಿಂಗ್ ಅಂತಹ ತುಳಿತಕ್ಕೊಳಗಾದವರೊಬ್ಬರು ಎಂದು ಹಲವು ಸೆಲೆಬ್ರಿಟಿಗಳು ಹೇಳಿದ್ದರು.
ಈಗ ಕೆಆರ್ಕೆ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಬರೀ ಸ್ವಜನಪಕ್ಷಪಾತವಷ್ಟೇ ಅಲ್ಲ, ಹಿಂದಿ ಚಿತ್ರರಂಗವನ್ನು ಕೇವಲ ಆರು ಕಂಪನಿಗಳ ಮುಷ್ಠಿಯಲ್ಲಿವೆ ಮತ್ತು ಈ ಆರು ಕಂಪನಿಗಳ ಅವಕೃಪೆಗೆ ಪಾತ್ರರಾದರೆ, ಅವರ ಸಿನಿಮಾ ಕೆರಿಯರ್ ಮುಕ್ತಾಯವಾದಂತೆ ಎಂದು ಹೇಳಿದ್ದಾರೆ.
ಇಡೀ ಹಿಂದಿ ಚಿತ್ರರಂಗವು ಆ ಆರು ಕಂಪನಿಗಳ ಹಿಡಿತದಲ್ಲಿದೆ ಎಂಬ ಮಾತಿದೆ. ಒಂದು ಪಕ್ಷ ಅವರಿಗೆ ಯಾರಾದರೂ ಸರಿ ಬರದಿದ್ದರೆ, ಅವರ ವೃತ್ತಿಜೀವನವನ್ನೇ ಮುಗಿಸುವುದಕ್ಕೂ ಅವರು ಹೇಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ ಕೆಆರ್ಕೆ. ಅಷ್ಟೇ ಅಲ್ಲ, ಆ ಆರು ಕಂಪನಿಗಳ ಹೆಸರುಗಳನ್ನೂ ಅವರು ಬಹಿರಂಗಪಡಿಸಿದ್ದಾರೆ. ಧರ್ಮ ಪ್ರೊಡಕ್ಷನ್ಸ್ (ಕರಣ್ ಜೋಹಾರ್, ಯಶ್ರಾಜ್ ಫಿಲಂಸ್ (ಆದಿತ್ಯ ಚೋಪ್ರಾ), ಟಿ-ಸೀರೀಸ್ (ಭೂಷಣ್ ಕುಮಾರ್, ಬಾಲಾಜಿ ಎಂಟರ್ಟೈನ್ಮೆಂಟ್ (ಏಕ್ತಾ ಕಪೂರ್), ನಡಿಯಾಡ್ವಾಲಾ ಗ್ರಾಂಡ್ಸನ್ (ಸಾಜಿದ್ ನಡಿಯಾಡ್ವಾಲಾ) ಮತ್ತು ಸಲ್ಮಾನ್ ಖಾನ್ ಫಿಲಂಸ್ (ಸಲ್ಮಾನ್ ಖಾನ್) ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ.