ಅವರನ್ನು ಯಾರೂ ದೂರ ಮಾಡಲಿಲ್ಲ; ಅವರೇ ದೂರ ಮಾಡಿಕೊಂಡರು ...

Sushant - Final 2
Published on

ಸುಶಾಂತ್​ ಸಿಂಗ್​ ರಜಪೂತ್​ ನಿಧನರಾಗಿ ಎರಡು ದಿನಗಳಾಗಿವೆ. ಈ ಎರಡು ದಿನಗಳಲ್ಲಿ ಎಷ್ಟೆಲ್ಲಾ ಬೆಳವಣಿಗೆಗಳು, ಎಷ್ಟೆಲ್ಲಾ ಸುದ್ದಿಗಳು. ಸುಶಾಂತ್​ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರು ಎಂದು ಕೆಲವರು ಹೇಳಿದರೆ, ಬಾಲಿವುಡ್​ ಎಂಬ ಕ್ರೂರ ಪ್ರಪಂಚ ಅವರನ್ನು ಕೊಲೆ ಮಾಡಿತು ಎಂದು ಕೆಲವರು ಹೇಳಿದರು. ಸುಶಾಂತ್​ಗೆ ಅವಕಾಶಗಳ ಕೊರತೆ ಇತ್ತು ಎಂದು ಕೆಲವರು ಹೇಳಿದರೆ, ಅವರನ್ನು ಬೆಳೆಯುವುದಕ್ಕೆ ಬಿಡಬಾರದೆಂದೇ ಒಂದು ವಲಯ ಅವಕಾಶಗಳನ್ನು ಕಿತ್ತುಕೊಂಡಿತು ಎಂದು ಕೆಲವರು ಹೇಳಿದರು. ಒಟ್ಟಾರೆ, ಎರಡೇ ದಿನಗಳ ಅಂತರದಲ್ಲಿ ಬಾಲಿವುಡ್​ನ ಹುಳುಕುಗಳೆಲ್ಲಾ ಒಂದೊಂದೇ ಆಚೆಗೆ ಬರುತ್ತಿದೆ.

ಈ ಮಧ್ಯೆ, ಸುಶಾಂತ್​ ಸಿಂಗ್​ ಅವರನ್ನು ಹತ್ತಿರದಿಂದ ನೋಡಿದ್ದ ಹಿರಿಯ ಪತ್ರಕರ್ತ ಸುಭಾಷ್​ ಕೆ ಝಾ ಅವರು, ಸುಶಾಂತ್​ಗೆ ಯಾವತ್ತೂ ಅವಕಾಶಗಳ ಕೊರತೆ ಇರಲಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಅವರನ್ನು ಯಾರೂ ಕಡೆಗಣಿಸಿರಲಿಲ್ಲ ಎಂದು ಹೇಳುತ್ತಾರೆ.

ಈ ಕುರಿತು ಮಾತನಾಡಿರುವ ಅವರು, ಸುಶಾಂತ್​ ಅಭಿನಯದ ಕೇದಾರನಾಥ್​ ಮತ್ತು ಚಿಚ್ಚೋರೆ ಹಿಟ್​ ಆಗಿದ್ದವು. ಅವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತಿದ್ದವು. ಅವರನ್ನು ಯಾರೂ ಒಬ್ಬ ಹೊರಗಿನವ ಎಂದು ಪರಿಗಣಿಸಿರಲಿಲ್ಲ. ದೊಡ್ಡ ದೊಡ್ಡ ನಿಮಾರ್ಪಕರಾದ ಸಾಜಿದ್​ ನಡಿಯಾಡ್​ವಾಲಾ, ದಿನೇಶ್​ ವಿಜನ್​ ಮುಂತಾದವರು ಸುಶಾಂತ್​ ಜತೆಗೆ ಚಿತ್ರ ಮಾಡುವುದಕ್ಕೆ ಮುಂದಾಗಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ, ಸುಶಾಂತ್​ಗೆ ಆಸಕ್ತಿ ಕಡಿಮೆಯಾಗಿತ್ತು. ನಿರ್ದೇಶಕರನ್ನು ಮೀಟ್​ ಮಾಡುವುದಕ್ಕೆ, ಹೊಸ ಹೊಸ ಚಿತ್ರಗಳ ಬಗ್ಗ ಚರ್ಚೆ ಮಾಡುವುದಕ್ಕೆ ಆಸಕ್ತಿ ತೋರಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇನ್ನು ಅವರನ್ನು ಚಿತ್ರರಂಗದವರು ಮತ್ತು ಸ್ನೇಹಿತರು ದೂರ ಮಾಡಿದರು ಎಂಬ ಕುರಿತು ಮಾತನಾಡಿರುವ ಅವರು, ದೂರ ಮಾಡಿದರು ಎನ್ನುವುದಕ್ಕಿಂತ, ಸುಶಾಂತ್​ಗೆ ಯಾರೊಡನೆ ಸೇರುವುದಕ್ಕೆ ಇಷ್ಟವಿರಲಿಲ್ಲ. ಅವರಿಗೆ ಒಬ್ಬರೇ ಇರುವುದಕ್ಕೆ ಆಸೆ ಇತ್ತು. ಸುಶಾಂತ್​ಗೆ ಏನಾಯಿತೋ, ಅದರಲ್ಲಿ ಯಾರ ತಪ್ಪೂ ಇಲ್ಲ ಎಂದು ಸುಭಾಷ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net