

ವಿಜಯಪುರ: ಎರಡು ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ಅಪ್ರಾಪ್ತ ವಯಸ್ಸಿನ ಇಬ್ಬರು ದಾಯಾದಿ ಸಹೋದರಿಯರ ಶವ ಬಾವಿಯೊಂದರಲ್ಲಿ ಪತ್ತೆಯಾಗಿವೆ. ಇಬ್ಬರ ಒಂದೊಂದು ಕೈಗಳನ್ನು ವೇಲ್ನಿಂದ ಕಟ್ಟಿ ಹಾಕಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನಗಳು ಮೂಡಿವೆ.
ನಾಪತ್ತೆಯಾಗಿ ಶವವಾಗಿ ಪತ್ತೆಯಾಗಿರುವ ಇಬ್ಬರೂ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಕುದುರಿ ಸಾಲವಾಡಗಿ ಗ್ರಾಮದವರು. ಪ್ರೀತಿ ಯಲಗೂರಪ್ಪ ಕಳ್ಳಿಮನಿ (14) ರೇಣುಕಾ ಸೂರಜಪ್ಪ ಕಳ್ಳಿಮನಿ (14) ಮೃತಪಟ್ಟವರು. ಇವರಿಬ್ಬರ ಶವ ದೇವರಹಿಪ್ಪರಗಿ ತಾಲೂಕಿನ ಕೊಂಡಗೂಳಿ ಗ್ರಾಮದ ಜಮೀನಿನ ಬಾವಿಯಲ್ಲಿ ಪತ್ತೆಯಾಗಿವೆ.
ಒಬ್ಬಳ ಒಂದು ಕೈಯನ್ನು ಇನ್ನೊಬ್ಬಳ ಒಂದು ಕೈ ಜತೆ ವೇಲ್ನಿಂದ ಕಟ್ಟಿ ಹಾಕಿರುವುದು ಕಂಡುಬಂದಿದೆ. ಬಾಲಕಿಯರಿಬ್ಬರೂ ಕೈಗಳನ್ನು ಕಟ್ಟಿಕೊಂಡು ತಾವೇ ಬಾವಿಗೆ ಹಾರಿದ್ದರೇ ಅಥವಾ ಯಾರಾದರೂ ಸಾಯಿಸಿ ಕೈಗಳನ್ನು ಕಟ್ಟಿ ಬಾವಿಗೆ ತಳ್ಳಿರಬಹುದೇ ಎಂಬ ಅನುಮಾನ ಮೂಡಿದೆ. ಸಾವಿಗೆ ಕಾರಣ ಏನು ಎಂಬುದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. ಸ್ಥಳಕ್ಕೆ ಬಸವನ ಬಾಗೇವಾಡಿ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.