ರೆಮ್​ಡೆಸಿವಿರ್​ ನಕಲಿ ದಂಧೆಯಲ್ಲಿ ವೈದ್ಯರೇ ಕಿಂಗ್​ಪಿನ್​; ಗ್ಲುಕೋಸ್​ ತುಂಬಿ ರೆಮ್​ಡೆಸಿವಿರ್ ಎಂದು ಮಾರಾಟ, ನಾಲ್ವರ ಬಂಧನ

Feature
Published on

ಬೆಂಗಳೂರು: ಕರೊನಾ ಮಿತಿಮೀರಿ ಹರಡುತ್ತಿದ್ದು, ಸೋಂಕಿತರ ಸಂಖ್ಯೆಯ ಜತೆಗೆ ಸೋಂಕಿನಿಂದಾಗಿ ಸಾಯುತ್ತಿರುವವರ ಪ್ರಮಾಣವೂ ಹೆಚ್ಚುತ್ತಿದೆ. ಈ ನಡುವೆ ಹಾಸಿಗೆ, ಐಸಿಯು, ಆಕ್ಸಿಜನ್ ಮಾತ್ರವಲ್ಲದೆ ರೆಮ್​ಡೆಸಿವಿರ್​​ನಂಥ ಔಷಧಗಳ ಕೊರತೆಯೂ ಕಾಡುತ್ತಿದೆ. ಈ ನಡುವೆ ಅದನ್ನು ಬ್ಲ್ಯಾಕ್​ನಲ್ಲಿ ಮಾರುತ್ತಿದ್ದ, ನಕಲಿ ತಯಾರಿಸಿ ಮಾರಾಟ ಮಾಡುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ದುರಂತವೆಂದರೆ ವೈದ್ಯರೊಬ್ಬರೇ ಈ ದಂಧೆಯ ಕಿಂಗ್​ಪಿನ್!

ಬೆಂಗಳೂರಿನ ಹೊಸೂರು ರಸ್ತೆಯ ಮಾತೃ ಆಸ್ಪತ್ರೆ ವೈದ್ಯ ಡಾ. ಸಾಗರ್, ಐಸಿಯು ವಾರ್ಡ್​ಬಾಯ್​ ಕೃಷ್ಣ ಸೇರಿ ನಾಲ್ವರನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ. ರವಿಕುಮಾರ್ ಮತ್ತು ಮುನಿರಾಜು ಬಂಧಿತ ಇತರರು. ಇವರು ಕಾಳಸಂತೆಯಲ್ಲಿ ಅಸಲಿ ರೆಮ್​ಡೆಸಿವಿರ್ ಮಾರಾಟ ಮಾಡುತ್ತಿದ್ದುದಷ್ಟೇ ಅಲ್ಲದೆ ಗ್ಲುಕೋಸ್​ ತುಂಬಿ ಅದನ್ನೇ ರೆಮ್​​ಡೆಸಿವಿರ್ ಎಂದು ನಂಬಿಸಿಯೂ ಮಾರುತ್ತಿದ್ದರು.

ಸರ್ಕಾರದಿಂದರ ರೋಗಿಗಳ ಹೆಸರಿನಲ್ಲಿ ಬೇಕಾದಷ್ಟು ರೆಮ್​ಡೆಸಿವಿರ್ ಪಡೆಯುತ್ತಿದ್ದ ಇವರು ಅವುಳಲ್ಲಿ ರೋಗಿಗಳಿ ಅರ್ಧದಷ್ಟು ಮಾತ್ರ ನೀಡಿ, ಉಳಿದವನ್ನು ದುಬಾರಿ ಬೆಲೆಗೆ ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು. ಒಂದು ರೆಮ್​ಡೆಸಿವಿರ್​​ ಔಷಧವನ್ನು 20 ಸಾವಿರ ರೂ.ಗೂ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇನ್ನು ರೋಗಿಗಳಿಗೆ ನೀಡಿ ಖಾಲಿಯಾದ ವಯಲ್​ಗೆ ಗ್ಲುಕೋಸ್ ತುಂಬಿ ಅದನ್ನೇ ಸೀಲ್​ ಮಾಡಿಸಿ ಅಸಲಿ ರೆಮ್​ಡೆಸಿವಿರ್ ಎಂದೂ ಮಾರಾಟ ಮಾಡುತ್ತಿದ್ದರು.

ಕಾಳಸಂತೆಯಲ್ಲಿ ರೆಮ್​ಡೆಸಿವಿರ್ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮುನಿರಾಜು ಎಂಬವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಕೃಷ್ಣ ಎಂಬಾತನಿಂದ ರೆಮ್​ಡೆಸಿವಿರ್​ ಪಡೆಯುತ್ತಿದ್ದುದನ್ನು ತಿಳಿಸಿದ್ದ. ಬಳಿಕ ಕೃಷ್ಣನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಡಾ.ಸಾಗರ್​ ಎಂಬಾತನಿಂದ ರೆಮ್​ಡೆಸಿವಿರ್ ಪಡೆಯುತ್ತಿದ್ದ ಮಾಹಿತಿ ಸಿಕ್ಕಿತ್ತು. ಈ ಮೂವರೂ ಈ ಹಿಂದೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅವರನ್ನು ಕೆಲಸದಿಂದ ತೆಗೆಯಲಾಗಿತ್ತು. ಬಳಿಕ ಮೂವರೂ ಮಾತೃ ಆಸ್ಪತ್ರೆಗೆ ಸೇರಿಕೊಂಡಿದ್ದರು.

ಜೆ.ಸಿ.ನಗರ ಎಸಿಪಿ ರೀನಾ ಸುವರ್ಣ ನೇತ್ರತ್ವದಲ್ಲಿ ಸಂಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳು ಯಾರ್ಯಾರಿಗೆ ನಕಲಿ ರೆಮ್​ಡೆಸಿವಿರ್​ ನೀಡಿದ್ದಾರೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಸದ್ಯ ಆರೋಪಿಗಳ ವಿರುದ್ಧ ಬ್ಲ್ಯಾಕ್​ನಲ್ಲಿ ಮಾರುತ್ತಿದ್ದ ಬಗ್ಗೆ ಹಾಗೂ ನಕಲಿ ಔಷಧ ಮಾರುತ್ತಿದ್ದ ಬಗ್ಗೆ ಎಂದು ಎರಡು ಪ್ರತ್ಯೇಕ ಮೊಕದ್ದಮೆಗಳನ್ನು ದಾಖಲಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net