

ಬೆಂಗಳೂರು: ಬೆಂಗಳೂರಿನಲ್ಲಿ ರಾತ್ರಿ ಹೊತ್ತು ಓಡಾಡುವವರಿಗೆ ಬೀದಿ ನಾಯಿಗಳ ಉಪಟಳ ಗೊತ್ತಿರುವಂಥದ್ದೇ. ಆದರೆ ಇಲ್ಲಿ ಹಾಡಹಗಲೇ ಸಾಕುನಾಯಿಯಿಂದಲೇ ಪ್ರಾಣಕ್ಕೆ ಸಂಚಕಾರ ಉಂಟಾಗಿದೆ. ಗಾರೆ ಕೆಲಸಗಾರರೊಬ್ಬರು ಒಬ್ಬ ಮಹಿಳೆ ಹಾಗೂ ನಾಯಿಯ ಕಾರಣಕ್ಕೆ ಪ್ರಾಣ ಕಳೆದುಕೊಳ್ಳುವಂತಾಗಿದೆ.
ಹೀಗೊಂದು ದುರಂತ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಟ್ಟೂರು ಬಡಾವಣೆಯಲ್ಲಿ ಇಂದು ಬೆಳಗ್ಗೆ ಈ ಪ್ರಕರಣ ಸಂಭವಿಸಿದೆ. ನಾಯಿ ಕಚ್ಚಿದ್ದರಿಂದ ಅಟ್ಟೂರು ಬಡಾವಣೆಯ ಗಾರೆ ಕೆಲಸಗಾರ ನರಸಿಂಹ ಮೃತಪಟ್ಟಿದ್ದಾರೆ.
ಯುವತಿಯೊಬ್ಬಳು ತಾನು ಸಾಕಿದ್ದ ನಾಯಿಯನ್ನು ಕರೆದುಕೊಂಡು ಇಂದು ವಾಕಿಂಗ್ಗೆ ಬಂದಿದ್ದಳು. ಈ ವೇಳೆ ಆಕೆಯಿಂದ ತಪ್ಪಿಸಿಕೊಂಡ ನಾಯಿ ಅಲ್ಲೇ ಪಕ್ಕದಲ್ಲಿದ್ದ ಗಾರೆ ಕೆಲಸಗಾರ ನರಸಿಂಹ ಅವರ ಮೇಲೆರಗಿ ಅವರ ಕುತ್ತಿಗೆಗೇ ಕಚ್ಚಿದೆ. ತೀವ್ರ ರಕ್ತಸ್ರಾವಕ್ಕೆ ಒಳಗಾದ ನರಸಿಂಹ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಅವರ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ನಾಯಿಯನ್ನು ವಾಕಿಂಗ್ಗೆ ಕರೆತಂದು ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾದ ಯುವತಿಯನ್ನು ಸ್ಥಳೀಯ ಕೆಲವು ಯುವಕರು ತರಾಟೆಗೆ ತೆಗೆದುಕೊಂಡಿದ್ದಾರೆ.