ಗಂಗೊಳ್ಳಿ: ಮರವಂತೆ ಶ್ರೀ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನಕ್ಕೆ ಊರವರು, ದಾನಿಗಳ ನೆರವಿನಿಂದ ನಿರ್ಮಾಣಗೊಂಡಿರುವ ರಜತ ರಥ ಸಮರ್ಪಣೆ ಭಾನುವಾರ ಅದ್ದೂರಿಯಾಗಿ ನೆರವೇರಿತು.
ಬೆಳಗ್ಗೆ ಪುರಮೆರವಣಿಗೆ, ರಜತ ರಥ ಸಮರ್ಪಣೆ ಬಳಿಕ ದೇವರಿಗೆ ವಿಶೇಷ ಪೂಜೆ ನಡೆಯಿತು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು, ಅರ್ಚಕ ವೃಂದ, ಉಪಾದಿವಂತರು, ಸಿಬ್ಬಂದಿ, ಊರ ಪ್ರಮುಖರು, ಭಕ್ತರು ಪಾಲ್ಗೊಂಡಿದ್ದರು.
ಧಾರ್ಮಿಕ ಸಭೆ: ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಹೊರನಾಡು ಧರ್ಮದರ್ಶಿ ಜಿ.ಭೀಮೇಶ್ವರ ಜೋಶಿ ಆಶೀರ್ವಚನ ನೀಡಿದರು. ಉಡುಪಿಯ ಭಾರತೀಯ ಸಂಸ್ಕೃತಿ ಪ್ರತಿಷ್ಠಾನ ಅಧ್ಯಕ್ಷ ರಾಜಶೇಖರ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಮರವಂತೆ ಗ್ರಾಪಂ ಅಧ್ಯಕ್ಷ ಲೋಕೇಶ್ ಖಾರ್ವಿ, ಉದ್ಯಮಿ, ಸಮಾಜಸೇವಕ ನಿತಿನ್ ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು. ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ ಅಧ್ಯಕ್ಷ ನಾಗೇಶ್ ಖಾರ್ವಿ ಅಳ್ವೆಕೋಡಿ, ಗಂಗೊಳ್ಳಿ ವಲಯ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ ಅಧ್ಯಕ್ಷ ಯಶವಂತ ಖಾರ್ವಿ, ರಜತ ರಥದ ಶಿಲ್ಪಿ ಬಳಗೂರು ಶ್ರೀ ಕಾಳಿಕಾಂಬಾ ಶಿಲ್ಪಕರೆ ಜಕ್ಕಣಾಚಾರ್ಯ ಅವರನ್ನು ಸನ್ಮಾನಿಸಲಾಯಿತು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಂ.ನಾಯಕ್ ಸ್ವಾಗತಿಸಿದರು. ವಿಶ್ವನಾಥ ಪಡುಕೋಣೆ, ಮಾಲತಿ ಆಚಾರ್ ಪಡುಕೋಣೆ ನಿರೂಪಿಸಿದರು. ಅನಿತಾ ಆರ್.ಕೆ. ವಂದಿಸಿದರು.