ಮುಂಬೈ: ಬಾಕ್ಸ್ ಆಫೀಸ್ ಸುಲ್ತಾನ್ ಮತ್ತು ಅಭಿಮಾನಿಗಳ ಭಾಯಿಜಾನ್ ಸಲ್ಮಾನ್ ಖಾನ್ ಅವರ ‘ಸಿಕಂದರ್’ (Sikandar) ಚಿತ್ರ ನಾಳೆ ಅಂದರೆ ಭಾನುವಾರ(ಮಾರ್ಚ್ 30) ಬಿಡುಗಡೆಯಾಗಲಿದೆ. ಅಭಿಮಾನಿಗಳು ಕೂಡ ಸಲ್ಮಾನ್‌ಗೆ ಈದ್ ನೀಡುವ ಫುಲ್ ಮೂಡ್‌ನಲ್ಲಿದ್ದಾರೆ. ಚಿತ್ರದ ಮೇಲಿನ ಕ್ರೇಜ್ ಅದ್ಭುತವಾಗಿದೆ. ಆದರೆ ಕುತೂಹಲಕಾರಿ ವಿಷಯವೆಂದರೆ ಚಿತ್ರದ ಟೀಸರ್, ಟ್ರೇಲರ್ ಮತ್ತು ಹಾಡುಗಳಿಗೆ ಸಿಕ್ಕ ಪ್ರತಿಕ್ರಿಯೆ ಆರಂಭಿಕ ದಿನದ ಮುಂಗಡ ಬುಕಿಂಗ್‌ನಲ್ಲಿ ಗೋಚರಿಸಿಲ್ಲ ಎಂದ ಹೇಳಲಾಗುತ್ತಿದೆ.

ರಂಜಾನ್ ಮತ್ತು ಈದ್ ಹಬ್ಬದ ಕಾರಣ ಇದು ನಡೆಯುತ್ತಿದೆ. ಈದ್ ಮಾರ್ಚ್ 31ರಂದು ಇರುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಮಾರ್ಚ್ 31 ಮತ್ತು ಏಪ್ರಿಲ್ 1ರ ಪ್ರದರ್ಶನಗಳ ಟಿಕೆಟ್‌ಗಳು ಆರಂಭಿಕ ಪ್ರದರ್ಶನಗಳಿಗಿಂತ ಹೆಚ್ಚು ಮಾರಾಟವಾಗುತ್ತಿವೆ. ವಿಶೇಷವಾಗಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಸೋಮವಾರ ಮತ್ತು ಮಂಗಳವಾರದ ಪ್ರದರ್ಶನಗಳು ಈಗಾಗಲೇ ಹೌಸ್‌ಫುಲ್ ಆಗಿ ಕಾಣುತ್ತಿವೆ.
ಎಆರ್ ಮುರುಗದಾಸ್ ನಿರ್ದೇಶನದ ‘ಸಿಕಂದರ್’ ಚಿತ್ರದಲ್ಲಿ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ, ಕಾಜಲ್ ಅಗರ್ವಾಲ್, ಸತ್ಯರಾಜ್, ಶರ್ಮಾನ್ ಜೋಶಿ, ಪ್ರತೀಕ್ ಬಬ್ಬರ್ ಮತ್ತು ಅಂಜಿನಿ ಧವನ್ ಕೂಡ ನಟಿಸಿದ್ದಾರೆ. ಚಿತ್ರದ ನಿರ್ಮಾಣ ಬಜೆಟ್ 200ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಸಲ್ಮಾನ್ ಖಾನ್ ಅವರ ಸಂಭಾವನೆ ಸೇರಿಲ್ಲ ಎನ್ನಲಾಗಿದೆ. ಸಲ್ಮಾನ್ ಖಾನ್ ಮತ್ತು ಸಾಜಿದ್ ನಾಡಿಯಾದ್ವಾಲಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
‘ಸಿಕಂದರ್’ ಮೊದಲ ದಿನ ಎಷ್ಟು ಗಳಿಸುತ್ತದೆ ಎಂಬ ಪ್ರಶ್ನೆಗೆ ಉತ್ತರವು ಈಗ ಸಂಪೂರ್ಣವಾಗಿ ಸ್ಪಾಟ್ ಬುಕಿಂಗ್ ಅನ್ನು ಅವಲಂಬಿಸಿರುತ್ತದೆ. ಸಲ್ಮಾನ್ ಖಾನ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ‘ಗಜನಿ’ ಖ್ಯಾತಿಯ ನಿರ್ದೇಶಕ ಮುರುಗದಾಸ್ ಅವರಿಂದ ಎಲ್ಲರಿಗೂ ಹೆಚ್ಚಿನ ನಿರೀಕ್ಷೆಗಳಿವೆ. ಅಂತಹ ಪರಿಸ್ಥಿತಿಯಲ್ಲಿ ಬೆಳಗಿನ ಪ್ರದರ್ಶನದ ನಂತರ ಚಿತ್ರವು ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆದರೆ ಭಾನುವಾರದ ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಪ್ರದರ್ಶನಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತದೆ.
ಈ ಹಿಂದೆ ‘ಸಿಕಂದರ್’ ಚಿತ್ರ ಬಿಡುಗಡೆಯಾದ ಮೊದಲ ದಿನವೇ ದೇಶದಲ್ಲಿ 60 ಕೋಟಿಗೂ ಹೆಚ್ಚು ವಹಿವಾಟು ನಡೆಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಎಲ್ಲವೂ ಸ್ಪಾಟ್ ಬುಕಿಂಗ್ ಮೇಲೆ ಅವಲಂಬಿತವಾಗಿರುವಾಗ ‘ಸಿಕಂದರ್’ ಮೊದಲ ದಿನವೇ 45-50 ಕೋಟಿ ರೂಪಾಯಿ ನಿವ್ವಳ ಸಂಗ್ರಹ ಮಾಡಬಹುದು ಎಂದು ವ್ಯಾಪಾರ ವಿಶ್ಲೇಷಕರು ಊಹಿಸುತ್ತಿದ್ದಾರೆ.
ಸಿಕಂದರ್ ಚಿತ್ರದ ಮೊದಲ ದಿನ ಗಳಿಕೆ ಕಡಿಮೆಯಾಗಿರಬಹುದು, ಆದರೆ ಎರಡನೇ ದಿನ ಈದ್ ಇರುವುದರಿಂದ ಮೊದಲ ದಿನಕ್ಕಿಂತ ಹೆಚ್ಚಿನ ಗಳಿಕೆ ಬರಲಿದೆ. ಇಷ್ಟೇ ಅಲ್ಲ ಚಂದ್ರನ ದರ್ಶನದ ನಂತರ ಈದ್ ಆಚರಣೆಯು ನಾಲ್ಕು ದಿನಗಳವರೆಗೆ ಮುಂದುವರಿಯುತ್ತದೆ. ಅಲ್ಲಿಯವರೆಗೂ ಅಂದರೆ ಏಪ್ರಿಲ್ 3 ರವರೆಗೆ ಸಿಕಂದರ್ ಸಿನಿಮಾ ಇದರ ಲಾಭವನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ.(ಏಜೆನ್ಸೀಸ್)