

ಉಡುಪಿ: ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ದಲಿತ ಸಿಎಂ ವಿಷಯವನ್ನು ತೇಲಿಬಿಟ್ಟಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಈಗ ಅದೇ ವಿಷಯವನ್ನೇ ಮುಂದಿಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಪ್ರತ್ಯುತ್ತರ ನೀಡಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿರುವ ಅವರು ಈ ವಿಷಯ ತಿಳಿಸಿದರು.
ತಾಕತ್ ಇದ್ದರೆ ದಲಿತರೊಬ್ಬರನ್ನು ಸಿಎಂ ಮಾಡಿ ಎಂದು ಸವಾಲೆಸಿರುವ ಸಿದ್ದರಾಮಯ್ಯ ವಿರುದ್ಧ ನಳಿನ್ಕುಮಾರ್ ಕಟೀಲ್ ಈಗ ದಲಿತ ಅಸ್ತ್ರವನ್ನೇ ಬಿಟ್ಟಿದ್ದಾರೆ. ಸಿದ್ದರಾಮಯ್ಯ ಹಿಂದೆ ಅಹಿಂದ ಹೋರಾಟ ಮಾಡಿದವರು. ಅಹಿಂದ ಹೋರಾಟ ಮಾಡಿ ಮುಖ್ಯಮಂತ್ರಿ ಕೂಡ ಆದವರು. ಆದರೆ ಸಿಎಂ ಆದಮೇಲೆ ಅಹಿಂದವನ್ನು ಮರೆತರು. ಮುಖ್ಯಮಂತ್ರಿ ಆಗಿ ಅವರು ಹಿಂದುಳಿದ ವರ್ಗಕ್ಕೆ ಏನೂ ಮಾಡಿಲ್ಲ. ಮಾತ್ರವಲ್ಲ ದಲಿತ ಮುಖ್ಯಮಂತ್ರಿ ಎಂಬ ಚರ್ಚೆಯನ್ನೇ ಮುಚ್ಚಿಹಾಕಿದರು ಎಂದು ನಳಿನ್ಕುಮಾರ್ ಕಟೀಲ್ ಹೇಳಿದರು.
ವಾಜಪೇಯಿ ಸರ್ಕಾರ ಮುಸ್ಲಿಂ ಬಂಧುವನ್ನು ರಾಷ್ಟ್ರಪತಿ ಮಾಡಿದೆ, ನರೇಂದ್ರ ಮೋದಿ ದಲಿತರನ್ನೇ ರಾಷ್ಟ್ರಪತಿ ಆಗಿಸಿದ್ದಾರೆ. ಯಡಿಯೂರಪ್ಪ ಅವರು ಗೋವಿಂದ ಕಾರಜೋಳ ಅವರನ್ನು ಉಪ ಮುಖ್ಯಮಂತ್ರಿ ಮಾಡಿದ್ದಾರೆ. ಈಗ ಕೇಂದ್ರದಲ್ಲಿ ನಾರಾಯಣ ಸ್ವಾಮಿ ಸಚಿವರಾಗಿದ್ದಾರೆ. ಕೇಂದ್ರ ಸಂಪುಟದಲ್ಲಿ ಶೇ. 30 ಎಸ್-ಎಸ್ಟಿ ಮಂತ್ರಿಗಳಿದ್ದಾರೆ. ಆದರೆ ಕಾಂಗ್ರೆಸ್ ದಲಿತರಿಗೆ ಏನು ಮಾಡಿದೆ ಎಂದು ಕಟೀಲ್ ಪ್ರಶ್ನೆ ಮಾಡಿದ್ದಾರೆ.
ಮಾತ್ರವಲ್ಲ, ಕಾಂಗ್ರೆಸ್ಗಾಗಿ ಹಗಲಿರುಳು ಕೆಲಸ ಮಾಡಿರುವ ಜಿ. ಪರಮೇಶ್ವರ್ ಅವರನ್ನು ಸಿದ್ದರಾಮಯ್ಯ ಮೂಲೆಗುಂಪು ಮಾಡಿದರು. ಪರಮೇಶ್ವರ ಹಾಗೂ ಸಿದ್ದರಾಮಯ್ಯ ಅವರನ್ನು ಸೋಲಿಸಿದ ಇತಿಹಾಸ ಅವರಿಗಿದೆ ಎನ್ನುವ ಮೂಲಕ ಇಬ್ಬರು ಪ್ರಬಲ ದಲಿತ ನಾಯಕರಿಗೆ ಸಿದ್ದರಾಮಯ್ಯ ಅನ್ಯಾಯ ಎಸಗಿದ್ದಾರೆ ಎಂಬುದನ್ನು ನಳಿನ್ ಕುಮಾರ್ ಕಟೀಲ್ ಪರೋಕ್ಷವಾಗಿ ಹೇಳಿದ್ದಾರೆ.
ನನಗೆ ಯಾವುದೇ ಮಾಹಿತಿ ಇಲ್ಲ: ಮುಂದಿನ ಸಿಎಂ ಕುರಿತ ಹೈಕಮಾಂಡ್ ಸಂದೇಶದ ಕುರಿತು ಮಾತನಾಡಿದ ಅವರು, ನಾನು ಬಿಜೆಪಿ ರಾಜ್ಯಾಧ್ಯಕ್ಷ, ಇವತ್ತಿನವರೆಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ. ನಾನು ಕೇವಲ ಮಾಧ್ಯಮಗಳಿಂದ ಈ ವಿಚಾರ ತಿಳಿದುಕೊಂಡಿದ್ದೇನೆ, ಈ ಬಗ್ಗೆ ನನಗೆ ಹೇಳಲು ಏನೂ ಇಲ್ಲ. ಸದ್ಯ ರಾಜ್ಯದ ಟ್ರ್ಯಾಕ್ಟರ್ ಈಗ ಯಡಿಯೂರಪ್ಪ ಬಿಡುತ್ತಿದ್ದಾರೆ ಎಂದು ಕಟೀಲ್ ಹೇಳಿದ್ದಾರೆ.