ಇನ್ನು ಶಿವರಾಮಯ್ಯ ಸರ್ಕಾರ: ಮಧ್ಯಾಹ್ನ 12.30ಕ್ಕೆ ಸಿದ್ದರಾಮಯ್ಯ ಸಿಎಂ, ಡಿಕೆಶಿ ಡಿಸಿಎಂ ಆಗಿ ಪ್ರಮಾಣ

Siddaramaiah Rahul
ದೆಹಲಿಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿಯನ್ನು ಭೇಟಿ ಮಾಡಿದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್.
Published on

ಬೆಂಗಳೂರು/ನವದೆಹಲಿ: ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ- ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಶನಿವಾರ ಅಸ್ತಿತ್ವಕ್ಕೆ ಬರಲಿದೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಮಧ್ಯಾಹ್ನ 12.30ಕ್ಕೆ ನಡೆಯುವ ಪ್ರಮಾಣ ವಚನ ಸಮಾರಂಭದಲ್ಲಿ ಸಿಎಂ, ಡಿಸಿಎಂ ಜೊತೆಗೆ ಕೆಲವು ಶಾಸಕರು ಸಚಿವರಾಗಿ ಸಂವಿಧಾನ ಗೌಪ್ಯತೆ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ. ಜ್ಯೋತಿಷಿಗಳ ಸಲಹೆಯಂತೆ ಮಧ್ಯಾಹ್ನ 12.30ಕ್ಕೆ ಕೃತ್ತಿಕಾ ನಕ್ಷತ್ರ, ಅಜಗಂಡ ನಾಮಯೋಗ, ಸಿಂಹಲಗ್ನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು, ಬಳಿಕ ವಿಧಾನಸೌಧದ ಮೂರನೇ ಮಹಡಿಯಲ್ಲಿ ಹೊಸ ಸರ್ಕಾರದ ಮೊದಲ ಸಂಪುಟ ಸಭೆ ನಡೆಯಲಿದೆ.

ಇನ್ನೊಂದೆಡೆ ಸಂಪುಟದಲ್ಲಿ ಯಾರ್ಯಾರು ಇರಬೇಕೆಂಬ ಬಗ್ಗೆ ಶುಕ್ರವಾರ ನವದೆಹಲಿಯಲ್ಲಿ ವಿವಿಧ ಸುತ್ತುಗಳಲ್ಲಿ ಸುದೀರ್ಘ ಸಭೆ ನಡೆಯಿತು. ಅಂತಿಮವಾಗಿ ಸಿಎಂ, ಡಿಸಿಎಂ ಸೇರಿ 27 ಮಂದಿ ಸಂಪುಟದಲ್ಲಿ ಇರಬೇಕೆಂಬ ಬಗ್ಗೆ ನಿರ್ಧಾರಕ್ಕೆ ಬರಲಾಯಿತು. ಸಮಾರಂಭದಲ್ಲಿ ರಾಹುಲ್ ಹಾಗೂ ಪ್ರಿಯಾಂಕಾ ಜತೆ ಸೋನಿಯಾ ಗಾಂಧಿ ಕೂಡ ಇರಲಿದ್ದಾರೆ.

ಲೋಕಸಭೆ ಚುನಾವಣೆ ಹಾಗೂ ಅದಕ್ಕೂ ಮುನ್ನ ನಡೆಯುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರುವ ಫಲಿತಾಂಶ ಕರ್ನಾಟಕದಲ್ಲಿ ಬಂದಿದೆ ಎಂದು ಭಾವಿಸಿರುವ ಕಾಂಗ್ರೆಸ್, ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ತಕ್ಷಣವೇ ಈಡೇರಿಸುವ ಮೂಲಕ ಇದೇ ಮಾಡಲ್ ಅನ್ನು ಮುಂದಿನ ಚುನಾವಣೆಯಲ್ಲಿ ಬಳಕೆ ಮಾಡಲು ನಿರ್ಧರಿಸಿದೆ. ಹೀಗಾಗಿ ಕರ್ನಾಟಕ ಕಾಂಗ್ರೆಸ್ ಮತ್ತು ರಾಜ್ಯ ಸರ್ಕಾರದ ನಡೆ ಗಮನ ಸೆಳೆಯಲಿದೆ. ಇದೇ ಕಾರಣಕ್ಕೆ ಪ್ರಮಾಣ ವಚನ ಸಮಾರಂಭವನ್ನು ರಾಷ್ಟ್ರೀಯ ಮಹತ್ವವಾಗಿ ಪಕ್ಷ ಪರಿಗಣಿಸಿದೆ.

ಸಚಿವರ ಆಯ್ಕೆ ಸವಾಲು: ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವಿನ ಸಂಘರ್ಷಕ್ಕೆ ತೆರೆಬಿದ್ದರೂ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿರುವ ಶಾಸಕರ ಪಟ್ಟಿಯನ್ನು ಸಿದ್ಧಪಡಿಸುವುದು ಉಭಯ ನಾಯಕರಿಗೆ ಸವಾಲಾಗಿ ಕಾಡಿದೆ.

ಈ ಬಾರಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಶಾಸಕರ ಸಂಖ್ಯೆ ಹೆಚ್ಚಿರುವುದರಿಂದ ಈ ಸಮುದಾಯಗಳಿಗೆ ಹೆಚ್ಚಿನ ಪ್ರಾಶಸ್ಱ ಸಿಗುವ ನಿರೀಕ್ಷೆ ಹೆಚ್ಚಿದೆ. ಸಂಪುಟ ರಚನೆ ಸಂಬಂಧ ದೆಹಲಿಗೆ ಬಂದು ಶುಕ್ರವಾರ ರಾತ್ರಿ ಒಳಗಾಗಿಯೇ ಬೆಂಗಳೂರಿಗೆ ವಾಪಸಾಗಬೇಕು ಎಂಬ ಉದ್ದೇಶ ಹೊಂದಿದ್ದ ಇಬ್ಬರು ನಾಯಕರು, ತಡರಾತ್ರಿಯಾದರೂ ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆಯಿಲ್ಲ ಎಂದೇ ಶನಿವಾರ ಮುಂಜಾನೆ ಬೆಂಗಳೂರಿಗೆ ವಾಪಸಾಗಲು ನಿರ್ಧರಿಸಿದರು. ಸರ್ಕಾರದ ನೇತೃತ್ವವನ್ನು ಸಿದ್ದರಾಮಯ್ಯ ವಹಿಸಿದ್ದರೂ, ಸಂಪುಟದಲ್ಲಿ ತಮ್ಮ ಅಭಿಪ್ರಾಯ ಮೇಲುಗೈ ಸಾಧಿಸಬೇಕು ಎಂದು ಪಣತೊಟ್ಟಿರುವ ಡಿಕೆಶಿ, ಆಪ್ತರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಯತ್ನಿಸಿದ್ದಾರೆ. ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಮತ್ತು ಈ ಹಿಂದೆ ತಮ್ಮ ವಿರುದ್ಧ ಹೇಳಿಕೆಗಳನ್ನು ನೀಡಿ ವಿರೋಧ ಹೊರಹಾಕಿದ್ದ ಶಾಸಕರಾದ ಜಮೀರ್ ಅಹ್ಮದ್, ಬಸವರಾಜ ರಾಯರೆಡ್ಡಿ ಮತ್ತು ಕೆ.ಎನ್. ರಾಜಣ್ಣ ಅವರನ್ನು ಯಾವುದೇ ಕಾರಣಕ್ಕೂ ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ಶಿವಕುಮಾರ್ ವರಿಷ್ಠರಿಗೆ ತಿಳಿಸಿದ್ದಾರೆನ್ನಲಾಗಿದೆ. ಸಿದ್ದರಾಮಯ್ಯ ಹೋದಲ್ಲೆಲ್ಲಾ ಹಿಂಬಾಲಕರಂತೆ ಕಾಣಿಸಿಕೊಳ್ಳುವ ಜಮೀರ್ ಅಹ್ಮದ್, ಸಿದ್ದರಾಮಯ್ಯ ತಮ್ಮನ್ನು ರಕ್ಷಿಸಿ ಮಂತ್ರಿಸ್ಥಾನ ಕೊಡಿಸುತ್ತಾರೆ ಎಂಬ ಬಲವಾದ ನಂಬಿಕೆಯಲ್ಲಿದ್ದಾರೆ. ಮುಸ್ಲಿಂ ಸಮುದಾಯದ ಕೋಟಾದಲ್ಲಿ ಶಾಸಕ ಯು.ಟಿ. ಖಾದರ್, ತನ್ವೀರ್ ಸೇಠ್, ಸಲೀಂ ಅಹ್ಮದ್, ಎನ್.ಎ. ಹ್ಯಾರಿಸ್ ಕೂಡ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಸಿದ್ದರಾಮಯ್ಯ, ಡಿಕೆ ಪ್ರತ್ಯೇಕ ಮಾತುಕತೆ

ಒಂದೇ ವಿಮಾನದಲ್ಲಿ ದೆಹಲಿಗೆ ಬಂದರೂ ಸಿದ್ದರಾಮಯ್ಯ ಮೊದಲಿಗೆ ನೇರವಾಗಿ ಕೆಸಿ ವೇಣುಗೋಪಾಲ್ ನಿವಾಸಕ್ಕೆ ತೆರಳಿ ಸಂಪುಟ ರಚನೆ ಬಗ್ಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿದರು. ತಮ್ಮ ಪಟ್ಟಿಯನ್ನು ವೇಣುಗೋಪಾಲ್​ಗೆ ನೀಡಿದ ಸಿದ್ದರಾಮಯ್ಯ, ಇದಕ್ಕೆ ಶಿವಕುಮಾರ್​ರನ್ನೂ ಒಪ್ಪಿಸಿ ಎಂದು ತಿಳಿಸಿದ್ದಾರೆನ್ನಲಾಗಿದೆ. ಸಿದ್ದರಾಮಯ್ಯ ಸಭೆ ಆರಂಭಿಸಿ 30 ನಿಮಿಷ ಬಳಿಕ ಶಿವಕುಮಾರ್ ಕೂಡ ಸಭೆಯಲ್ಲಿ ಪಾಲ್ಗೊಂಡರು. ಸಿದ್ದರಾಮಯ್ಯ ಸಭೆ ಮುಗಿಸಿ ತೆರಳಿದರೂ, ನಂತರ ಶಿವಕುಮಾರ್-ವೇಣುಗೋಪಾಲ್ ಮಧ್ಯೆ ಅರ್ಧ ಗಂಟೆಗಿಂತಲೂ ಹೆಚ್ಚು ಹೊತ್ತು ಸಭೆ ನಡೆಯಿತು. ಸಂಪುಟಕ್ಕೆ ಸಂಬಂಧಿಸಿ ತಡರಾತ್ರಿವರೆಗೆ ಸಭೆ ಮೇಲೆ ಸಭೆ ನಡೆದಿದ್ದರೂ, ಎರಡೂ ನಾಯಕರು ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಅಧಿಕೃತ ಘೊಷಣೆಗೆ ಮುನ್ನ ಯಾವುದೇ ಕಾರಣಕ್ಕೂ ವದಂತಿಗಳಿಗೆ ಆಸ್ಪದ ನೀಡಬಾರದು ಎಂದು ಮಾಧ್ಯಮದಿಂದ ದೂರವುಳಿದಿದ್ದರು.

ಸೋನಿಯಾ, ರಾಹುಲ್ ಭಾಗಿ

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ವಾಧ್ರಾ ಹಾಗೂ ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳ ಸಿಎಂ, ತಮಿಳುನಾಡು, ಬಿಹಾರ ಸಿಎಂ ಕೂಡ ಹಾಜರಿರುವರು. ವಿವಿಧ ಪಕ್ಷಗಳ ಪ್ರಮುಖರನ್ನೂ ಆಹ್ವಾನಿಸಲಾಗಿದೆ.

ಇಂದೇ ಗ್ಯಾರಂಟಿ ಅನುಷ್ಠಾನ

ಸರ್ಕಾರ ಮೊದಲ ಸಂಪುಟ ಸಭೆಯಲ್ಲಿ ಪ್ರಮುಖ ತೀರ್ವನಗಳನ್ನು ಕೈಗೊಂಡು ಪ್ರಕಟಿಸಲಿದೆ. ಮುಖ್ಯವಾಗಿ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ, ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂ., ತಲಾ 10 ಕೆಜಿ ಅಕ್ಕಿ, ಮಹಿಳೆಯರಿಗೆ ಸರ್ಕಾರಿ ಬಸ್​ನಲ್ಲಿ ಪ್ರಯಾಣ ಉಚಿತ, ನಿರುದ್ಯೋಗಿ ಭತ್ಯೆ 3000 ರೂ. ನೀಡುವ ಸಂಬಂಧ ಸಂಪುಟ ಸಭೆಯಲ್ಲಿ ನಿರ್ಣಯಿಸಲಿದ್ದು, ತಕ್ಷಣದಿಂದ ಜಾರಿ ಮಾಡಲು ಆದೇಶವನ್ನೂ ಹೊರಡಿಸಲಿದೆ.

ಹಿರಿಯರನ್ನು ಕೈಬಿಡುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಎಂಟು ಸಿಎಂಗಳ ಜತೆ ಕೆಲಸ ಮಾಡಿದ್ದೇನೆ. ಸ್ಪೀಕರ್ ಆಗುವ ಅರ್ಹತೆ ನನಗಿಲ್ಲ ಅನಿಸುತ್ತದೆ. ಅದು ಬಹಳ ದೊಡ್ಡ ಜವಾಬ್ದಾರಿ. ಆ ಬಗ್ಗೆ ಯಾರೂ ನನ್ನ ಜತೆ ರ್ಚಚಿಸಿಲ್ಲ. | ಆರ್.ವಿ. ದೇಶಪಾಂಡೆ ಮಾಜಿ ಸಚಿವ

ಕಾರ್ಯಕ್ರಮ ಸ್ವರೂಪ

  • ರಾಜ್ಯಪಾಲರಿಂದ ಮಧ್ಯಾಹ್ನ 12.30ಕ್ಕೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಚಾಲನೆ.
  • ರಾಷ್ಟ್ರಗೀತೆ ಬಳಿಕ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವರು.
  • ಬಳಿಕ ಡಿ.ಕೆ.ಶಿವಕುಮಾರ್ ಸಂಪುಟ ದರ್ಜೆ ಸಚಿವರಾಗಿ ಗೌಪ್ಯತಾ ವಿಧಿ ಪೂರ್ಣಗೊಳಿಸುವರು.
  • ನಂತರ ಉಳಿದ ಸಂಪುಟ ಸಚಿವರು ಗುಂಪು ಗುಂಪಲ್ಲಿ ರಾಜ್ಯಪಾಲರಿಂದ ಪ್ರತಿಜ್ಞೆ ಸ್ವೀಕರಿಸುವರು.
  • ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನ.
  • ರಾಜ್ಯಪಾಲರು ತೆರಳಿದ ಬಳಿಕ ಸಭಾ ಕಾರ್ಯಕ್ರಮ ನಡೆಯುವುದು.

ಮಂತ್ರಿ ರೇಸ್​ನಲ್ಲಿರುವವರು

| ರಾಮಲಿಂಗಾರೆಡ್ಡಿ | ಕೆ.ಜೆ ಜಾರ್ಜ್ | ಕೃಷ್ಣಬೈರೇಗೌಡ/ದಿನೇಶ್ ಗುಂಡೂರಾವ್ | ಜಮೀರ್ ಅಹಮದ್ ಖಾನ್ | ಶರತ್ ಬಚ್ಚೇಗೌಡ | ಚೆಲುವರಾಯಸ್ವಾಮಿ | ಸುಧಾಕರ್ | ಎಚ್.ಸಿ ಮಹಾದೇವಪ್ಪ | ಪುಟ್ಟರಂಗಶೆಟ್ಟಿ | ಯು.ಟಿ ಖಾದರ್, ಮಧುಬಂಗಾರಪ್ಪ | ಆರ್.ವಿ ದೇಶಪಾಂಡೆ | ಶಾಮನೂರು ಮಲ್ಲಿಕಾರ್ಜುನ | ಸಂತೋಷ್ ಲಾಡ್ | ಸತೀಶ್ ಜಾರಕಿಹೊಳಿ | ಲಕ್ಷ್ಮೀ ಹೆಬ್ಬಾಳ್ಕರ್ | ಲಕ್ಷ್ಮಣ ಸವದಿ | ಡಾ.ಜಿ ಪರಮೇಶ್ವರ್, ಕೆ.ಎನ್ ರಾಜಣ್ಣ | ಎಂ.ಬಿ ಪಾಟೀಲ್ | ಶರಣ ಪ್ರಕಾಶ್ ಪಾಟೀಲ್, ಪ್ರಿಯಾಂಕ ಖರ್ಗೆ | ಕೆ.ಎಚ್.ಮುನಿಯಪ್ಪ/ರೂಪಕಲಾ ಶಶಿಧರ್ | ಶಿವರಾಜ ತಂಗಡಗಿ/ರಾಘವೇಂದ್ರ ಹಿಟ್ನಾಳ್ | ತುಕಾರಾಂ/ಬಸನಗೌಡ ತುರುವಿಹಾಳ | ಬಿ.ಕೆ.ಹರಿಪ್ರಸಾದ್/ಸಲೀಂ ಅಹಮದ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net