

ನವದೆಹಲಿ: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದ ಬೆನ್ನಿಗೇ ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಪ್ರತಿಕ್ರಿಯೆ ನೀಡಿದ್ದು, 2 ಸಾವಿರ ನೋಟನ್ನು ಬ್ಯಾಂಡೇಜ್ ಎಂದು ಕರೆದಿದ್ದಾರೆ.
ನಿರೀಕ್ಷೆಯಂತೆ ಕೇಂದ್ರ ಸರ್ಕಾರ/ಆರ್ಬಿಐ 2000 ರೂ. ನೋಟುಗಳನ್ನು ಹಿಂದೆಗೆದುಕೊಂಡಿದೆ ಮತ್ತು ನೋಟುಗಳನ್ನು ಬದಲಾಯಿಸಲು ಸೆಪ್ಟೆಂಬರ್ 30ರವರೆಗೆ ಸಮಯ ನೀಡಿದೆ. 2000 ರೂಪಾಯಿ ನೋಟು ವಿನಿಮಯದ ಜನಪ್ರಿಯ ಮಾಧ್ಯಮವಲ್ಲ. ನಾವು ಇದನ್ನು 2016ರ ನವೆಂಬರ್ನಲ್ಲೇ ಹೇಳಿದ್ದೇವೆ ಮತ್ತು ನಾವು ಸರಿ ಎಂದು ಸಾಬೀತಾಗಿದೆ ಎಂದು ಪಿ.ಚಿದಂಬರಂ ಹೇಳಿದ್ದಾರೆ.
ಜನಪ್ರಿಯ ಮತ್ತು ವ್ಯಾಪಕವಾಗಿ ವಿನಿಮಯದಲ್ಲಿದ್ದ 500 ಮತ್ತು 1000 ರೂ. ನೋಟುಗಳನ್ನು ಅಮಾನ್ಯಗೊಳಿಸುವ ಮೂರ್ಖ ನಿರ್ಧಾರವನ್ನು ಮರೆಮಾಚಲು 2000 ರೂ. ನೋಟು ಒಂದು ಬ್ಯಾಂಡೇಜ್ ಆಗಿತ್ತು. ನೋಟು ಅಮಾನ್ಯೀಕರಣದ ಕೆಲವು ವಾರಗಳ ನಂತರ ಕೇಂದ್ರ ಸರ್ಕಾರ/ಆರ್ಬಿಐ 500 ರೂ. ನೋಟನ್ನು ಮತ್ತೆ ಪರಿಚಯಿಸಲು ಒತ್ತಾಯಿಸಲಾಯಿತು. ಇನ್ನು 1000 ರೂ. ಮುಖಬೆಲೆಯ ನೋಟುಗಳನ್ನು ಮತ್ತೆ ಪರಿಚಯಿಸಿದರೆ ನನಗೆ ಆಶ್ಚರ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ನೋಟು ಅಮಾನ್ಯೀಕರಣ ಒಂದು ಸುತ್ತು ಬಂದಿದೆ ಎಂದಿರುವ ಚಿದಂಬರಂ, 2 ಸಾವಿರ ರೂ. ನೋಟು ಯಾವತ್ತೂ ಕ್ಲೀನ್ ನೋಟ್ ಆಗಿರಲಿಲ್ಲ. ಬಹಳಷ್ಟು ಮಂದಿಯಿಂದ ಅದು ಬಳಕೆಯೇ ಆಗುತ್ತಿರಲಿಲ್ಲ. ಅದು ಕಾಳಧನ ಇರುವವರಲ್ಲಿ ತಾತ್ಕಾಲಿಕ ಬಳಕೆಗಷ್ಟೇ ಆಗಿತ್ತು ಎಂದಿದ್ದಾರೆ.