

ಶುಭಾ ಪೂಂಜಾ ಇದುವರೆಗೂ ಹಲವು ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಅದೊಂದು ಪಾತ್ರದಲ್ಲಿ ಅವರು ಇದುವರೆಗೂ ನಟಿಸಿರಲಿಲ್ಲವಂತೆ. ಈಗ ಅಂಥದ್ದೊಂದು ಅವಕಾಶ ಅವರಿಗೆ 'ಅಂಬುಜಾ' ಎಂಬ ಚಿತ್ರದಲ್ಲಿ ಸಿಕ್ಕಿದೆ.
ಮೊದಲೇ ಹೇಳಿದಂತೆ, ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರ ಅವರಿಗೆ 'ಅಂಬುಜಾ' ಚಿತ್ರದಲ್ಲಿ ಸಿಕ್ಕಿದೆ. ಇಷ್ಟಕ್ಕೂ ಆ ಪಾತ್ರವೇನು ಗೊತ್ತಾ? ಕ್ರೈಂ ರಿಪೋರ್ಟರ್. ತನ್ನ ತನಿಖೆಯಿಂದ ಅಪರಾಧ ಪ್ರಕರಣವೊಂದನ್ನು ಭೇದಿಸುವಂತಹ ಪಾತ್ರದಲ್ಲಿ ಶುಭಾ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದು, ಈ ಬಗ್ಗೆ ಸಖತ್ ಎಕ್ಸೈಟ್ ಆಗಿದ್ದಾರೆ.
ಅಂದಹಾಗೆ, 'ಅಂಬುಜಾ' ಚಿತ್ರವನ್ನು ನಿರ್ದೇಶಿಸುತ್ತಿರುವವರು ಶ್ರೀನಿ. ಈ ಹಿಂದೆ 'ಕೆಲವು ದಿನಗಳ ನಂತರ' ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಶ್ರೀನಿ, ಕೆಲವು ವರ್ಷಗಳ ಹಿಂದೆ ಬಿಜಾಪುರದ ಲಂಬಾಣಿ ಕುಟುಂಬವೊಂದರಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ, ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಇದೊಂದು ಹಾರರ್ ಕಂ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಸದ್ಯದಲ್ಲೇ ಶೂಟಿಂಗ್ ಪ್ರಾರಂಭವಾಗಲಿದೆ. ಶುಭಾ ಪೂಂಜ ಅಲ್ಲದೆ, 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಗೋವಿಂದೇ ಗೌಡ, ಈ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಮಿಕ್ಕ ಕಲಾವಿದರ ಮತ್ತು ತಂತ್ರಜ್ಱರ ಆಯ್ಕೆ ಇನ್ನಷ್ಟೇ ಆಗಬೇಕಿದೆ.
ಸದ್ಯದ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಿಂದ ‘ಅಂಬುಜಾ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಬೆಂಗಳೂರಲ್ಲದೆ, ಚಿಕ್ಕಮಗಳೂರು, ರಾಯಚೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಯಲಿದೆ.