ತಮ್ಮ ಕಾಲಿಗೆ ತಾವೇ ಗುಂಡು ಹಾರಿಸಿಕೊಂಡರು: ವಿಪಕ್ಷಗಳ ವಿರುದ್ಧ ಗುಡುಗಿದ ಪ್ರಧಾನಿ ಮೋದಿ! PM Modi

PM Modi
Published on

PM Modi : ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿ ಕಳೆದ ಮೇ ತಿಂಗಳಲ್ಲಿ ಆರಂಭಿಸಲಾದ ಆಪರೇಷನ್ ಸಿಂಧೂರ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ಸಮಯ ಕೇಳುವ ಮೂಲಕ ವಿಪಕ್ಷವು ದೊಡ್ಡ ತಪ್ಪು ಮಾಡಿದೆ ಎಂದು ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಬಿಜೆಪಿ ನೇತೃತ್ವದ ಆಡಳಿತ ಮೈತ್ರಿಕೂಟದ ಸಂಸದರು ದೆಹಲಿಯಲ್ಲಿ ಸಭೆ ನಡೆಸಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಸರ್ಕಾರ ರಚನೆಯಾದ ನಂತರ ಸಂಸತ್ತಿನ ಅಧಿವೇಶನ ಸಂದರ್ಭದಲ್ಲಿ ನಡೆದ ಎರಡನೇ ಸಭೆಯಾಗಿದೆ. ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಆಪರೇಷನ್​ ಸಿಂಧೂರ ಚರ್ಚೆಯ ಸಮಯದಲ್ಲಿ ವಿಪಕ್ಷದವರೇ ತೀವ್ರ ಟೀಕೆಗೆ ಒಳಗಾದರು ಮತ್ತು ಸ್ವಯಂ ಹಾನಿ ಮಾಡಿಕೊಂಡರು. ಅಂದರೆ, ತಾವೇ ಗುಂಡು ಹಾರಿಸಿಕೊಂಡರು ಎಂದು ಮೋದಿ ಹೇಳಿರುವುದಾಗಿ ವರದಿಯಾಗಿದೆ.

ಇದೇ ಸಭೆಯಲ್ಲಿ, ಆಪರೇಷನ್​ ಸಿಂಧೂರ ಯಶಸ್ಸಿಗಾಗಿ ಪ್ರಧಾನಿ ಮೋದಿ ಅವರನ್ನು ಸನ್ಮಾನಿಸಲಾಯಿತು. ಏಪ್ರಿಲ್​ 22ರಂದು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಓರ್ವ ನೇಪಾಳಿ ಪ್ರಜೆ ಸೇರಿ 26 ಅಮಾಯಕರು ಮೃತಪಟ್ಟರು. ಬಳಿಕ ಉಗ್ರರ ದಾಳಿಗೆ ಪ್ರತಿಯಾಗಿ ಮೇ 7ರಂದು ಆರಂಭಿಸಲಾದ ಆಪರೇಷನ್ ಸಿಂಧೂರ್ ಅಡಿಯಲ್ಲಿ ನೂರಾರು ಉಗ್ರರರನ್ನು ಸೆದೆಬಡಿಯಲಾಯಿತು. ಅಲ್ಲದೆ, ಪಾಕ್​ ಮತ್ತು ಪಾಕ್​ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ತಾಣಗಳನ್ನು ಧ್ವಂಸ ಮಾಡಲಾಯಿತು. ಉಗ್ರರ ದಾಳಿಗೆ ಕೇಂದ್ರ ಸರ್ಕಾರ ತೋರಿಸಿದ ಖಡಕ್​ ಪ್ರತಿಕ್ರಿಯೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಯವ ಅವರ "ಅಸಾಧಾರಣ ನಾಯಕತ್ವ"ಕ್ಕಾಗಿ ಅವರನ್ನು ಸನ್ಮಾನಿಸಲಾಯಿತು.

ಪ್ರಧಾನಿ ಮೋದಿಯವರ ಅಚಲವಾದ ಸಂಕಲ್ಪ, ದೂರದೃಷ್ಟಿಯ ರಾಜನೀತಿ ಮತ್ತು ದೃಢನಿಶ್ಚಯದ ಆಜ್ಞೆಯು ರಾಷ್ಟ್ರವನ್ನು ಮುನ್ನಡೆಸಿರುವುದು ಮಾತ್ರವಲ್ಲದೆ, ಎಲ್ಲ ಭಾರತೀಯರ ಹೃದಯಗಳಲ್ಲಿ ಏಕತೆ ಮತ್ತು ಹೆಮ್ಮೆಯ ಮನೋಭಾವವನ್ನು ಹೊತ್ತಿಸಿದೆ ಎಂದು ಎನ್‌ಡಿಎ ಸಂಸದರು ನಿರ್ಣಯದಲ್ಲಿ ತಿಳಿಸಿದ್ದಾರೆಂದು ವರದಿಯಾಗಿದೆ.

ಇದೇ ವೇಳೆ ಪ್ರಧಾನಿ ಮೋದಿ ಅವರು ಭಾರತೀಯ ಸಶಸ್ತ್ರ ಪಡೆಗಳ ಅಸಾಧಾರಣ ಧೈರ್ಯ ಮತ್ತು ಅಚಲ ಬದ್ಧತೆಗೆ ನಮನ ಸಲ್ಲಿಸಿದರು. ಯೋಧರ ಧೈರ್ಯವು ನಮ್ಮ ರಾಷ್ಟ್ರವನ್ನು ರಕ್ಷಿಸುವ ಅವರ ಅಚಲ ಭಕ್ತಿಯನ್ನು ಎತ್ತಿ ತೋರಿಸುತ್ತದೆ ಎಂದರು. ಅಲ್ಲದೆ, ಪಹಲ್ಗಾಮ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡ 26 ಜನರಿಗೆ ಸಂತಾಪ ಕೂಡ ಸೂಚಿಸಿದರು.

ಈ ಭಯೋತ್ಪಾದಕ ದಾಳಿಯು ಎಲ್ಲರನ್ನೂ ದುಃಖಿತರನ್ನಾಗಿಸಿತು ಮತ್ತು ಕೆರಳಿಸಿತು ಎಂದು ಇದೇ ಸಭೆಯಲ್ಲಿ ಸಂಸದರು ಹೇಳಿದರು. ಅಲ್ಲದೆ, ಭಯೋತ್ಪಾದಕ ತರಬೇತಿ ಶಿಬಿರಗಳ ಮೇಲೆ ನಡೆದ ಆಪರೇಷನ್ ಸಿಂಧೂರ ಯಾವುದೇ ಸಾರ್ವಜನಿಕ ಉಲ್ಬಣವಿಲ್ಲದೇ ನಿಖರವಾದ ಗುರಿಯೊಂದಿಗೆ ನಡೆಯಿತು ಎಂದರು. ಇದು ಭಾರತದ ಶಾಂತಿಗೆ ಬದ್ಧತೆ, ಭಯೋತ್ಪಾದನೆಯ ಬಗ್ಗೆ ಭಾರತಕ್ಕಿರುವ ಶೂನ್ಯ ಸಹಿಷ್ಣುತೆ ಮತ್ತು ಪರಿಸ್ಥಿತಿಗಳು ಅಗತ್ಯವಿದ್ದರೆ ಭಯೋತ್ಪಾದಕ ಮೂಲಸೌಕರ್ಯವನ್ನು ಬೇರುಸಹಿತ ಕಿತ್ತುಹಾಕಲು ಭಾರತ ಏನು ಬೇಕಾದರೂ ಮಾಡುತ್ತದೆ ಎಂಬ ಸಂದೇಶವಾಗಿದೆ ಎಂದು ಸಂಸದರು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net