ದಲಿತರ ವಿರುದ್ಧ ನಾಲಿಗೆ ಹರಿಬಿಟ್ಟು ತಲೆಮರೆಸಿಕೊಂಡಿದ್ದ ನಟಿ 3 ವರ್ಷದ ಬಳಿಕ ಬಂಧನ! ಯಾರು ಈ ಮೀರಾ ಮಿಥುನ್? Meera Mitun

Meera Mitun
Published on

Meera Mitun : ಸಾಮಾಜಿಕ ಜಾಲತಾಣದಲ್ಲಿ ದಲಿತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಟಿ, ರೂಪದರ್ಶಿ ಮತ್ತು ಯೂಟ್ಯೂಬರ್ ಮೀರಾ ಮಿಥುನ್ ಅವರನ್ನು ತಮಿಳುನಾಡಿನ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಘಟನೆ 2021 ರಲ್ಲಿ ನಡೆದಿತ್ತು. ಆಗ ಬಂಧಿಸಲ್ಪಟ್ಟಿದ್ದ ನಟಿ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ತಲೆಮರೆಸಿಕೊಂಡಿದ್ದರು. ಸಾಲು ಸಾಲು ನೋಟಿಸ್​ ನೀಡಿದರೂ ಪ್ರಕರಣದ ವಿಚಾರಣೆಗೆ ಹಾಜರಾಗಲು ವಿಫಲವಾದ ನಂತರ 2022ರಲ್ಲಿ ಮೀರಾ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು. ಅಂದಿನಿಂದ ಆಕೆಗಾಗಿ ಹುಟುಕಾಟ ನಡೆಸಲಾಗುತ್ತಿತ್ತು.

ಸುಮಾರು ಮೂರು ವರ್ಷಗಳ ನಂತರ ಮೀರಾರನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂಧಿಸಲಾಗಿದೆ. ಆಗಸ್ಟ್ 11 ರಂದು ನಟಿಯನ್ನು ಚೆನ್ನೈ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.

ಬಂಧನ ವಾರಂಟ್ ಹೊರಡಿಸಿ ಮೂರು ವರ್ಷಗಳಾದರೂ ನಟಿಯನ್ನು ಬಂಧಿಸಲು ಸಾಧ್ಯವಾಗದ ಪೊಲೀಸರನ್ನು ನ್ಯಾಯಾಲಯ ಟೀಕಿಸಿತ್ತು. ಕೊನೆಗೂ ಆಕೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೀರಾ ಮಿಥುನ್ ಮತ್ತು ಆಕೆಯ ಸ್ನೇಹಿತ ಸ್ಯಾಮ್ ಅಭಿಷೇಕ್ ವಿರುದ್ಧ ಏಳು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಏನಿದು ಪ್ರಕರಣ?

ಅನೇಕ ಮಾಧ್ಯಮಗಳ ವರದಿ ಪ್ರಕಾರ ಮೀರಾ 2021ರ ಆಗಸ್ಟ್​ 7ರಂದು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಅಪ್​ಲೋಡ್​ ಮಾಡಿದ್ದರು. ಆ ವಿಡಿಯೋದಲ್ಲಿ ದಲಿತ ಸಮುದಾಯದ ಬಗ್ಗೆ ಮೀರಾ ಕೆಲ ಅವಹೇಳಕಾರಿ ಮಾತುಗಳನ್ನು ಆಡಿದ್ದರು. ಆ ಸಮಯದಲ್ಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ನಟಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅನೇಕ ನೆಟ್ಟಿಗರು ಒತ್ತಾಯ ಮಾಡಿದ್ದರು. ಸಿನಿಮಾ ಫಸ್ಟ್​ ಲುಕ್​ಗೆ ಬಳಸಿಕೊಳ್ಳಲು ನಿರ್ದೇಶಕರೊಬ್ಬರು ನನ್ನ ಫೋಟೋವನ್ನು ಕದ್ದಿದ್ದರು ಎಂದು ಮೀರಾ ಆರೋಪಿಸಿದ್ದರು. ಇದಾದ ಬಳಿಕ ದಲಿತ ಸಮುದಾಯದ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ದಲಿತ ಸಮುದಾಯದವರು ಅಪರಾಧ ಮತ್ತು ಅಕ್ರಮ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಹೀಗಾಗಿ ಅವರು ಸಮಾಜದಲ್ಲಿ ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಮಿಳು ಚಿತ್ರರಂಗದಲ್ಲಿರುವ ದಲಿತ ಸಮುದಾಯದ ನಿರ್ದೇಶಕರು ಮತ್ತು ಜನರನ್ನು ಹೊರಗಾಕಬೇಕೆಂದು ಹೇಳಿದ್ದಳು.

ಯಾರು ಈ ಮೀರಾ ಮಿಥುನ್​?

ತಮಿಳಿನ ವಿಜಯ್ ಟಿವಿಯಲ್ಲಿ ಪ್ರಸಾರವಾದ ಬಿಗ್​ಬಾಸ್ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದು ನಟಿಯಾದವಳು ಈ ಮೀರಾ ಮಿಥುನ್​. ವಿಜಯ್ ಟಿವಿಯಲ್ಲಿ ಪ್ರಸಾರವಾದ ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದರು. 8 ತೋಟಕಲ್, ಥಾನಾ ಸೇರ್ಂಥ ಕೂಟಂ ಮತ್ತು ಬೋಧೈ ಯೇರಿ ಬುದ್ಧಿ ಮಾರಿ ಮುಂತಾದ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಸಿನಿಮಾಗಳಿಗಿಂತ ಈಕೆ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿದ್ದಾಳೆ. ಹಿಂದೊಮ್ಮೆ ನಟ ವಿಜಯ್​, ಸೂರ್ಯ ಸೇರಿದಂತೆ ಅನೇಕ ನಟರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಸುದ್ದಿಯಾಗಿದ್ದಳು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net