ಸುದೀಪ್​ ಹೇಳಿಕೆಯಿಂದ ಆಘಾತ ಹಾಗೂ ನೋವಾಗಿದೆ: ನಟ ಪ್ರಕಾಶ್​ ರಾಜ್​

Sudeep and Prakash Raj
Published on

ನವದೆಹಲಿ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಿಸಿರುವ ನಟ ಸುದೀಪ್​ ಅವರು ನಿರ್ಧಾರದಿಂದ ನನಗೆ ನೋವಾಗಿದೆ ಎಂದು ಬಹುಭಾಷ ನಟ ಪ್ರಕಾಶ್​ ರಾಜ್​ ಹೇಳಿದ್ದಾರೆ.

ನಾನು ಸುದೀಪ್​ ಅವರ ಹೇಳಿಕೆಯನ್ನು ಕೇಳಿ ಆಘಾತಕ್ಕೆ ಒಳಗಾಗಿದ್ದೇನೆ ಮತ್ತು ತುಂಬಾ ನೋವಾಗಿದೆ ಎಂದು ಪ್ರಕಾಶ್​ ರಾಜ್​ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಈ ಮುಂಚೆ ಟ್ವೀಟ್​ ಮಾಡಿದ್ದ ಅವರು ಕರ್ನಾಟಕದಲ್ಲಿ ಸೋಲುವ ಭಯದಲ್ಲಿ ಭ್ರಷ್ಟ ಬಿಜೆಪಿ ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ಬಲವಾಗಿ ನಂಬುತ್ತೇನೆ. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ಎಂದು ಪ್ರಕಾಶ್​ ರಾಜ್​ ಟ್ವೀಟ್​ ಮೂಲಕ ಟೀಕಾ ಪ್ರಹಾರ ನಡೆಸಿದ್ದರು.

ಪ್ರಕಾಶ್​ ರಾಜ್​ ಟ್ವೀಟ್​ ಬೆನ್ನಲ್ಲೇ ಸುದೀಪ್​ ಅವರು ಸಿಎಂ ಬೊಮ್ಮಾಯಿ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ, ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಹೇಳಿದರು. ಸುದೀಪ್​ ಅವರ ಈ ನಿಲುವಿಗೆ ಪ್ರಕಾಶ್​ ರಾಜ್​ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಮಾತ್ರವಲ್ಲದೆ, ಅನೇಕರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವರು ಸುದೀಪ್​ ಬೆಂಬಲಕ್ಕೆ ನಿಂತಿದ್ದಾರೆ. ಸುದೀಪ್​ ಅವರು ಪಕ್ಷದಿಂದ ಸ್ಪರ್ಧೆ ಮಾಡುತ್ತಿಲ್ಲ. ಕಷ್ಟಕಾಲದಲ್ಲಿ ಜತೆಯಾದ ಸಿಎಂ ಬೊಮ್ಮಾಯಿ ಪರ ಪ್ರಚಾರ ಮಾಡುವುದಾಗಿ ಮಾತ್ರ ಹೇಳಿದ್ದಾರೆ ಎನ್ನುವ ಮೂಲಕ ನೆಚ್ಚಿನ ನಟನನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ನಿನ್ನೆ ಖಾಸಗಿ ಹೋಟೆಲ್​​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ಇಲ್ಲಿ ನನ್ನ ನಿಲುವು ಅಂತಾ ಏನು ಇಲ್ಲ. ‌ರಾಜಕೀಯವೂ ಇಲ್ಲ. ಕಷ್ಟದ ದಿನಗಳಲ್ಲಿ ಬೊಮ್ಮಾಯಿ ಮಾಮ ನನಗೆ ಬೆಂಗಾವಲಾಗಿ ನಿಂತರು. ಹೀಗಾಗಿ ಇಂದು ಅವರ ಪರ ನಾನು ನಿಲ್ಲುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಬಿಜೆಪಿಯ ತತ್ವ ಸಿದ್ಧಾಂತಗಳಿಗೆ‌ ಒಪ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸುದೀಪ್​, ನನ್ನ ಮನೆಯಲ್ಲಿ ಒಬ್ಬರು ತಂದೆ ಇದ್ರೆ ಅವರು ಹೇಳಿದಂತೆ‌ ಕೇಳ್ತೀವಿ. ಅವರಿಗೆ ಸಹಾಯ ಬೇಕು ಅಂದ್ರೆ ನಾನು ಅವರ ಪರ‌ ನಿಲ್ಲೋದು ನನ್ನ ಕರ್ತವ್ಯ. ಒಬ್ಬ ವ್ಯಕ್ತಿಯ ಪರವಾಗಿ ನಿಲ್ತೀವಿ ಅಂದ್ರೆ ಪಕ್ಷದ ಪರವಾಗಿ ನಿಲ್ತೇವೆ ಎಂದರ್ಥ ಎಂದು ಹೇಳಿದರು.

ನಾನು ಎಲ್ಲರಿಗೂ ಕ್ಯಾಂಪೇನ್ ಮಾಡಲು ಆಗೋದಿಲ್ಲ. ನಾನು ಬಂದಿರೋದು ಬೊಮ್ಮಾಯಿ ಮಾವನಿಗೋಸ್ಕರ. ಅವರು ಹೇಳಿದರೆ, ಅವಶ್ಯಕತೆ ಬಂದರೆ,‌ ಇತರರ ಪರನೂ ಕ್ಯಾಂಪೇನ್ ಮಾಡ್ತೇನೆ ಎಂದು ಹೇಳಿದರು. ನಿಮ್ಮ ಮೇಲೆ ಇಡಿ, ಐಟಿ ಒತ್ತಡವೇನಾದ್ರೂ ಹಾಕಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ, ಸುದೀಪ್ ಹಾಗೇನು ಇಲ್ಲ. ನಮ್ಮ ಮನೆಗೆ ಈಗಾಗಲೇ ಇಡಿ, ಐಟಿ ಬಂದು ಹೋಗಿದ್ದಾರೆ. ಅವರಿಗೆ ಮನೆಯಲ್ಲಿ ಏನೂ ಸಿಗಲಿಲ್ಲ ಎನ್ನುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರು. ​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net