

ಬೆಂಗಳೂರು: ಆ ಕಡೆ ನಟ ಸುದೀಪ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಅವರ ಪರ ಪ್ರಚಾರ ಮಾಡುವುದಾಗಿ ಘೋಷಿಸಿದರೆ, ಇನ್ನೊಂದು ಕಡೆ ಅಭಿಷೇಕ್ ಅಂಬರೀಷ್ ತಮ್ಮ ತಾಯಿ ಹಾಗೂ ಸಂಸದೆ ಸುಮಲತಾ ಅಂಬರೀಷ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
ಇಷ್ಟಕ್ಕೂ ಪ್ರಧಾನಿ ಮೋದಿ ಅವರನ್ನು ಅಭಿಷೇಕ್ ಭೇಟಿ ಮಾಡಿದ್ದು ಏಕೆ ಎಂಬ ಪ್ರಶ್ನೆ ಬರಬಹುದು. ಅವರು ಸಹ ಏನಾದರೂ ಭಾರತೀಯ ಜನತಾ ಪಕ್ಷಕ್ಕೆ ಸೇರುತ್ತಾರಾ? ಅಥವಾ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಏನಾದರೂ ಇದೆಯಾ ಎಂದನಿಸಬಹುದು. ಹಾಗೇನಿಲ್ಲ, ನರೇಂದ್ರ ಮೋದಿ ಅವರನ್ನು ಅಭಿಷೇಕ್ ಭೇಟಿ ಮಾಡಿದ್ದು ತಮ್ಮ ಮದುವೆಗೆ ಆಹ್ವಾನಿಸುವುದಕ್ಕೆ.
ಈ ಸಂಬಂಧ ಬುಧವಾರ, ಅಭಿಷೇಕ್ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮದುವೆಗೆ ಆಹ್ವಾನಿಸುವುದರ ಜತೆಗೆ ಅವರ ಆಶೀರ್ವಾದವನ್ನೂ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಸುಮಲತಾ ಸಹ ಹಾಜರಿದ್ದರು.
ಇನ್ನು, ಅಭಿಷೇಕ್ ಅಭಿನಯದ 'ಬ್ಯಾಡ್ ಮ್ಯಾನರ್ಸ್' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಮೇನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಆ ನಂತರ ಜೂನ್ನಲ್ಲಿ ಮದುವೆ ಮುಗಿಸಿ, 'ಕಾಳಿ' ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.