

ಚಕ್ಕಮಗಳೂರು: ಮೇ 10 ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಎದುರಾಳಿಗಳು ಮತ್ತು ವಿರೋಧ ಪಕ್ಷದ ಅಭ್ಯರ್ಥಿಗಳು ಒಬ್ಬರ ಮೇಲೊಬ್ಬರು ಕೆಸರು ಎರಚಾಟ ಮಾಡಿಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ವಿರುದ್ಧವಾಗಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಕಳಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಪಂಚ ಮೋದಿಯನ್ನ ಹೊಗಳಿ ಕೊಂಡಾಡುತ್ತಿದೆ. ರಷ್ಯಾ-ಉಕ್ರೇನ್ ಯುದ್ಧವಾದಾಗ ಮಧ್ಯಸ್ಥಿಕೆ ವಹಿಸಿದ್ದು ಪ್ರಧಾನಿ ಮೋದಿ. ಈ ಹಿಂದೆ ಯಾರಿಗೂ ಈ ಗಡಸುತನ ಇರಲಿಲ್ಲ. ಜಗತ್ತೇ ಮೆಚ್ವಿರೋ ಅಂತಹಾ ನಾಯಕರಿಗೆ ಕಾಂಗ್ರೆಸ್ ಅವಮಾನ ಮಾಡಿದ ಎಂದು ಆರೋಪಿಸಿದ್ದಾರೆ.
ಮೋದಿಗೆ ಸೋನಿಯಾ ಸಾವಿನ ವ್ಯಾಪಾರಿ ಅಂದಿದ್ರು, ಪ್ರಿಯಾಂಕ ಗಾಂಧಿ, ನಾಲಾಯಕ್, ಹಿಟ್ಲರ್ ಅಂದಿದ್ರು, ಮಹಾರಾಷ್ಟ್ರ ಚುನಾವಣೆ ವೇಳೆ ಖರ್ಗೆ 100 ತಲೆ ರಾವಣ ಅಂದಿದ್ದರು. ಈಗ ವಿಷ ಸರ್ಪ, ನೆಕ್ಕಿ ನೋಡಿದರೆ ಸಾಯ್ತೀರಾ ಅಂದಿದ್ದಾರೆ. ಖರ್ಗೆ ಕೇವಲ ಕರ್ನಾಟಕದ ನಾಯಕರಲ್ಲ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಅವರ ಮಾತನ್ನು ಚೀನಾ, ಪಾಕಿಸ್ತಾನ,ಅಮೆರಿಕಾ ಎಲ್ಲಾ ಕೇಳಿಸಿಕೊಳ್ತಾರೆ ಎಂದು ಕಾಂಗ್ರೆಸ್ ನಡೆ ವಿರುದ್ಧವಾಗಿ ಕಿಡಿಕಾರಿದ್ದಾರೆ.
ಮೋದಿ ಅವರಿಗೆ ಅವಮಾನ ಮಾಡುವುದನ್ನ ಯಾರೂ ಕ್ಷಮಿಸಲ್ಲ. ಖರ್ಗೆ ಅವರು ಬೇಷರತ್ ಕ್ಷಮೆ ಕೇಳಬೇಕು. ಕಾಂಗ್ರೆಸ್ ಖರ್ಗೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.