ಸಿನಿಮಾ

ಮಹಾರಾಜಗೆ ಚಕ್ರವರ್ತಿ ಸಾಥ್: ‘ಟೈಗರ್ ನಾಗೇಶ್ವರರಾವ್’ ಚಿತ್ರಕ್ಕೆ ಶಿವಣ್ಣ ಧ್ವನಿ

ನಟ ಶಿವರಾಜಕುಮಾರ್ ಇತ್ತೀಚಿನ ವರ್ಷಗಳಲ್ಲಿ ಪರಭಾಷಾ ಚಿತ್ರಗಳಲ್ಲೂ ಆಗೊಮ್ಮೆ ಈಗೊಮ್ಮೆ ಮಿಂಚುತ್ತಿರುತ್ತಾರೆ. ಹಾಗೇ ಪರಭಾಷಾ ನಟರನ್ನೂ ಕನ್ನಡಕ್ಕೆ ಕರೆದುಕೊಂಡುಬರುತ್ತಾರೆ. 2015ರಲ್ಲಿ ಬಿಡುಗಡೆಯಾದ ‘ವಜ್ರಕಾಯ’ ಚಿತ್ರದಲ್ಲಿ ತೆಲುಗು ನಟ ರವಿತೇಜ, ಮಲಯಾಳಂ ನಟ ದಿಲೀಪ್ ಹಾಗೂ ತಮಿಳು ಸ್ಟಾರ್ ಶಿವಕಾರ್ತಿಕೇಯನ್ ಹಾಡೊಂದರಲ್ಲಿ ಶಿವಣ್ಣನ ಜತೆ ಕುಣಿದಿದ್ದರು. ಬಳಿಕ ನಂದಮೂರಿ ಬಾಲಕೃಷ್ಣ ಅಭಿನಯದ 2017ರಲ್ಲಿ ತೆರೆಗೆ ಬಂದ ತೆಲುಗಿನ ‘ಗೌತಮಿಪುತ್ರ ಶತಕರ್ಣಿ’ ಚಿತ್ರದಲ್ಲಿ ಶಿವರಾಜಕುಮಾರ್ ಕಾಳಹಸ್ತೀಶ್ವರನ ಪಾತ್ರದಲ್ಲಿ ನಟಿಸಿದ್ದರು. ಇದೀಗ ರಜಿನಿಕಾಂತ್ ಅವರ ‘ಜೈಲರ್’ ಹಾಗೂ ಧನುಷ್ ನಾಯಕನಾಗಿರುವ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರಗಳಲ್ಲಿ ವಿಶೇಷ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅದರ ಬೆನ್ನಲ್ಲೇ ಮತ್ತೊಂದು ತೆಲುಗು ಚಿತ್ರತಂಡಕ್ಕೆ ತಮ್ಮದೇ ರೀತಿಯಲ್ಲಿ ಬೆಂಬಲ ನೀಡಿದ್ದಾರೆ ಶಿವಣ್ಣ.


‘ಟೈಗರ್ ನಾಗೇಶ್ವರ ರಾವ್’, ತೆಲುಗು ಸ್ಟಾರ್ ರವಿತೇಜ ನಟಿಸುತ್ತಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಇದೇ ತಿಂಗಳ 24ರಂದು ಚಿತ್ರದ ಮೊದಲ ನೋಟ ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದೀಗ ಕನ್ನಡದ ಟೀಸರ್‌ಗೆ ಶಿವರಾಜಕುಮಾರ್ ಧ್ವನಿ ನೀಡಿದ್ದಾರೆ.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ; ಸಿನಿಮಾ ನಿರ್ಮಾಣ ಸಂಸ್ಥೆ ಮೇಲೆ ಇಡಿ ದಾಳಿ

ವಂಶಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ‘ಟೈಗರ್ ನಾಗೇಶ್ವರ ರಾವ್’. 70ರ ದಶಕದಲ್ಲಿ ಹೈದರಾಬಾದ್‌ನ ಸ್ಟುವರ್ಟ್‌ಪುರಂ ಎಂಬ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಚಿತ್ರವಿದು. ಈ ಹಿಂದಿನ ಚಿತ್ರಗಳಿಗಿಂತ ರವಿತೇಜ ಗೆಟಪ್, ಬಾಡಿ ಲಾಂಗ್ವೇಜ್ ಸಂಪೂರ್ಣವಾಗಿ ಭಿನ್ನವಾಗಿರಲಿದೆ. ಅವರಿಗೆ ಇಬ್ಬರು ನಾಯಕಿಯರಿದ್ದು ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಮತ್ತೆ ಸಿಎಂ; ಬಡವರ ಪಾಲಿಗೆ ವರದಾನವಾಗಿದ್ದ ಇಂದಿರಾ ಕ್ಯಾಂಟೀನ್​ಗೆ ಸಿಗಲಿದ್ಯಾ ಮರುಜೀವ?

ಚಿತ್ರಕ್ಕೆ ಆರ್. ಮಧಿ ಛಾಯಾಗ್ರಹಣ, ಜಿ.ವಿ. ಪ್ರಕಾಶ್ ಸಂಗೀತವಿರಲಿದೆ. ‘ಟೈಗರ್ ನಾಗೇಶ್ವರ ರಾವ್’ ದಸರಾ ಹಬ್ಬದ ಸಂಭ್ರಮದಲ್ಲಿ ಅಕ್ಟೋಬರ್ 22ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. (ಏಜೆನ್ಸೀಸ್)

Latest Posts

ಲೈಫ್‌ಸ್ಟೈಲ್