More

    ನನ್ನ ಬಳಿ ಉತ್ತರ ಇಲ್ಲ: ಉತ್ತಮ ಅವಕಾಶಗಳ ನಿರೀಕ್ಷೆಯಲ್ಲಿ ಸಿಂಧು ಲೋಕನಾಥ್

    ‘ಲೈಫು ಇಷ್ಟೇನೆ’ ಚಿತ್ರದ ಮೂಲಕ 2011ರಲ್ಲಿ ನಾಯಕಿಯಾಗಿ ಪದಾರ್ಪಣೆ ಮಾಡಿದ ನಟಿ ಸಿಂಧು ಲೋಕನಾಥ್ ಬಳಿಕ ‘ಡ್ರಾಮಾ’, ‘ಯಾರೇ ಕೂಗಾಡಲಿ’, ‘ಲವ್ ಇನ್ ಮಂಡ್ಯ’, ‘ಕೇಸ್ ನಂ. 18/9’, ‘ಕಾಣದಂತೆ ಮಾಯವಾದನು’ ಸೇರಿದಂತೆ 15ಕ್ಕೂ ಅಧಿಕ ಚಿತ್ರಗಳಲ್ಲಿ ಮಿಂಚಿದ್ದಾರೆ. ಜತೆಗೆ ತಮಿಳು, ತುಳು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇಂತಹ ಸಿಂಧು 2021ರಲ್ಲಿ ಬಿಡುಗಡೆಯಾದ ‘ಕೃಷ್ಣ ಟಾಕೀಸ್’ ಬಳಿಕ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಹಾಗಾದರೆ ಸಿಂಧು ಎಲ್ಲಿಗೆ ಹೋದರು? ಈಗೇನು ಮಾಡುತ್ತಿದ್ದಾರೆ? ಮುಂದೇನು ಮಾಡಲಿದ್ದಾರೆ? ಇಂತಹ ಹಲವು ಪ್ರಶ್ನೆಗಳಿಗೆ ವಿಜಯವಾಣಿ ಜತೆ ಮುಕ್ತವಾಗಿ ಮಾತನಾಡಿದ್ದಾರೆ.

    | ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು

    • ಸಿಂಧು ಸಿನಿಮಾಗಳಿಂದ ದೂರವಾಗಿದ್ದಾರಾ?

    – ಖಂಡಿತ ಇಲ್ಲ. ನಾನು ಸಿನಿಮಾ ಕಥೆ ಕೇಳುತ್ತಿದ್ದೇನೆ. ಆದರೆ, ಇನ್ನೂ ಯಾವುದೂ ಫೈನಲ್ ಆಗಿಲ್ಲ. ಬಹುತೇಕ ಹೊಸಬರೇ ಬರುತ್ತಿರುವ ಕಾರಣ, ಬಜೆಟ್ ಇಲ್ಲ, ರಿಲೀಸ್ ಆದಮೇಲೆ ಬರುವ ಹಣದಲ್ಲಿ ಸಂಭಾವನೆ ಕೊಡುತ್ತೇವೆ, ಶೇರ್ ಕೊಡುತ್ತೇವೆ ಎನ್ನುತ್ತಾರೆ. ಈಗಿನ ಪರಿಸ್ಥಿತಿಯಲ್ಲಿ ಸಿನಿಮಾ ರಿಲೀಸ್ ಆಗುವುದೇ ಕಷ್ಟ. ಥಿಯೇಟರ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿವೆ.

    • ಶೇರ್ ಅಂದರೆ ಒಳ್ಳೆಯದೇ ಅಲ್ಲವೇ?

    – ದೊಡ್ಡ ಹೀರೋಗಳಾದರೆ ಅವರಿಗೆ ಶೇರ್ ಓಕೆ. ಥಿಯೇಟರ್ ಶೇರ್, ಟಿವಿ ರೈಟ್ಸ್, ಓಟಿಟಿ ಹಕ್ಕು ಅಂತ ಹೇಗೋ ಹಣ ಮಾಡಿಕೊಳ್ಳುತ್ತಾರೆ. ಆದರೆ, ಹೊಸಬರಿಗೆ ಆ ಅವಕಾಶಗಳು ದೊರೆಯುವುದೂ ಕಷ್ಟ. ಇನ್ನು ಕೆಲವರು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡುತ್ತೇವೆ ಎನ್ನುತ್ತಾರೆ. ಆದರೆ, ಕನ್ನಡ ಚಿತ್ರಗಳಿಗೆ ಓಟಿಟಿಯಲ್ಲಿ ದೊಡ್ಡ ಮಟ್ಟದ ವೇದಿಕೆ ದೊರೆಯುತ್ತಿಲ್ಲ.

    • ಕೆಲವು ಕನ್ನಡದ ನಟಿಯರು ಪರಭಾಷೆಗಳಲ್ಲೂ ನಟಿಸುತ್ತಿದ್ದಾರೆ…

    – ನಾನು ಪರಭಾಷೆಗಳಿಗೆ ಹೋಗಲು ಪ್ರಯತ್ನಿಸಿಲ್ಲ. ಕನ್ನಡದಲ್ಲೇ ಉತ್ತಮ ಅವಕಾಶಗಳಿಗೆ ಕಾದು, ಒಳ್ಳೆಯ ಸಿನಿಮಾನೇ ಮಾಡುತ್ತೇನೆ.

    • ನಿಮ್ಮನ್ನು ತೆರೆಯ ಮೇಲೆ ನೋಡಿ ಎರಡು ವರ್ಷವೇ ಆಯಿತು…

    – ಹೌದು, ‘ಕಾಣದಂತೆ ಮಾಯವಾದನು’ ಚಿತ್ರ ರಿಲೀಸ್ ಆದ ಒಂದು ತಿಂಗಳಿಗೆ ಕೋವಿಡ್ ಮೊದಲ ಅಲೆ ಬಂತು. ಹಾಗೇ ‘ಕೃಷ್ಣ ಟಾಕೀಸ್’ ಬಿಡುಗಡೆ ಸಮಯದಲ್ಲಿ ಎರಡನೇ ಅಲೆ ಬಂತು. ನಾನೇನೋ ಕಥೆ, ಪಾತ್ರ ಇಷ್ಟವಾದರೆ ನಟಿಸಲು ಸಿದ್ಧ. ನನ್ನಲ್ಲಿ ಸಿನಿಮಾ ಬಗ್ಗೆ ಮೊದಲು ಭರವಸೆ, ಆತ್ಮವಿಶ್ವಾಸ ಮೂಡಬೇಕು.

    • ಈಗೀಗ ವೆಬ್​ಸರಣಿಗಳೂ ಹೆಚ್ಚಾಗಿ ಮೂಡಿಬರುತ್ತಿವೆ.

    – ಹೌದು, ಕಳೆದ ಎರಡು ವರ್ಷಗಳಲ್ಲಿ ನಾನು ಎರಡು ವೆಬ್​ಸರಣಿಗಳಲ್ಲಿ ನಟಿಸಿದ್ದೇನೆ. ‘ಪದ್ಮವ್ಯೂಹ’ ಹಾಗೂ ‘ಡ್ರೀಮರ್ಸ್’ ಎರಡೂ ಓಟಿಟಿಯಲ್ಲಿ ಬಿಡುಗಡೆ ಯಾಗಿವೆ.

    • ಮುಂದೇನು?

    – ಮುಂದೆ ಏನು ಅಂತ ನಾನೂ ಕಾಯುತ್ತಿದ್ದೇನೆ. ನನ್ನ ಬಳಿ ಸದ್ಯಕ್ಕಂತೂ ಉತ್ತರವಿಲ್ಲ. ಆದಷ್ಟು ಬೇಗೆ ಒಂದೊಳ್ಳೆ ಪ್ರಾಜೆಕ್ಟ್ ಸೈನ್ ಮಾಡಿ ಖಂಡಿತ ತಿಳಿಸುತ್ತೇನೆ…

    ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್​ ಪೈಪೋಟಿ ಮಧ್ಯೆ ಸಿಎಂ ಸ್ಥಾನಕ್ಕೆ ಮತ್ತೊಬ್ಬರು ಆಕಾಂಕ್ಷಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts