ಬಂಡಾಯದ ಧ್ವನಿ ಕಳೆದುಕೊಂಡಿದೆ ಸಾಹಿತ್ಯ ಕ್ಷೇತ್ರ

blank

ಸಾಗರ: ಸಾಹಿತ್ಯವು ಪ್ರತಿಭಟಿಸುವ ಬಂಡಾಯದ ಧ್ವನಿಯನ್ನು ಕಳೆದುಕೊಂಡಿದ್ದು ಅಧಿಕಾರದಲ್ಲಿ ಇರುವವರು, ಎಲ್ಲ ಪಕ್ಷದವರು ಸಾಹಿತ್ಯಕಾರರು, ಚಿಂತಕರ ಮಾತುಗಳನ್ನು ಕೇಳುವುದೂ ಇಲ್ಲ ಹಾಗೂ ಅವರಿಗೆ ಇಷ್ಟವಾಗುವುದೂ ಇಲ್ಲ. ದೇಶದಲ್ಲಿ ಪ್ರಸ್ತುತ ಇರುವ ಅಪಾಯಕಾರಿ ಸಂಗತಿ ಎಂದರೆ ಬೌದ್ಧಿಕ ದಾಸ್ಯ ಮತ್ತು ಗುಲಾಮಿ ಮಾನಸಿಕತೆ ಎಂದು ತಾಲೂಕು ಮಟ್ಟದ 12ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಅ.ರಾ.ಶ್ರೀನಿವಾಸ್ ಹೇಳಿದರು.

ನಗರಸಭೆ ರಂಗಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ 12ನೇ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಮುಕ್ತವಾಗಿ ಮಾತನಾಡುವ ವಾತಾವರಣ ಇಲ್ಲ. ಅಧಿಕಾರಸ್ಥರ ವಿರುದ್ಧ ಮಾತನಾಡಿದರೆ ನಕ್ಸಲರು, ದೇಶದ್ರೋಹಿ ಅಥವಾ ಅಭಿವೃದ್ಧಿ ವಿರೋಧಿ ಮುದ್ರೆ ಒತ್ತಿ ನ್ಯಾಯಾಲಯದಲ್ಲಿ ಕೇಸ್ ದಾಖಲಾಗುವ ಸಂಕಟ ಎದುರಾಗಿದೆ ಎಂದು ತಿಳಿಸಿದರು.

ಪರಿಸರ ವಿರೋಧಿ ಯೋಜನೆ: ಶರಾವತಿ ಪಂಪ್ಡ್ ಸ್ಟೋರೇಜ್ ಹೆಸರಿನಲ್ಲಿ ರಾಜ್ಯ ಸರ್ಕಾರ ಪರಿಸರ ವಿರೋಧಿ ಯೋಜನೆಗೆ ಮುಂದಾಗಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಅ.ರಾ.ಶ್ರೀನಿವಾಸ್ ಹೇಳಿದರು. ಯೋಜನೆಯು ಅವೈಜ್ಞಾನಿಕ ಎಂದು ಪರಿಸರಾಸಕ್ತರು ಹೇಳುತ್ತಿದ್ದಾರೆ. ಉತ್ಪಾದನೆ ಮಾಡುವ ವಿದ್ಯುತ್‌ಗಿಂತ ನೀರು ಮೇಲೆತ್ತಲು ಹೆಚ್ಚು ವಿದ್ಯುತ್ ಬೇಕು ಎನ್ನಲಾಗುತ್ತಿದೆ. ಆದರೂ ಸರ್ಕಾರ ಕಿವಿಗೋಡುತ್ತಿಲ್ಲ. ಪರಿಸರ ರಕ್ಷಣೆ ಮಾಡಿ ಅಭಿವೃದ್ಧಿ ಸಾಧಿಸುವ ಕೆಲ ಯೋಜನೆ ಇದ್ದರೂ ಸರ್ಕಾರ ಏಕೆ ಗಮನ ಹರಿಸುತ್ತಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ದೌರ್ಜನ್ಯ ನಡೆಯುತ್ತಿದೆ. ಈ ಅನ್ಯಾಯವನ್ನು ಖಂಡಿಸಬೇಕು ಎಂದರೆ ಪ್ರತಿಭಟನೆಗಳು ಸಿದ್ಧಾಂತದ ತಳಹದಿ ಮೇಲೆ ನಡೆಯಬೇಕು. ಸಾಮಾನ್ಯರು ಪಾಲ್ಗೊಳ್ಳುವಂತಾಗಬೇಕು ಎಂದರು.

ಸಂಬಂಧ, ಸೌಹಾರ್ದತೆ, ಪ್ರೀತಿ, ವಿಶ್ವಾಸಗಳ ನಡುವೆ ಕೆಲ ಘಟನೆ ಕಂದಕ ಸೃಷ್ಟಿಸುತ್ತಿವೆ. ಯಾರದೋ ಸ್ವಾರ್ಥಕ್ಕೆ ಸಂಬಂಧಗಳು ಸುಟ್ಟು ಹೋಗಿವೆ. ಕಾಣದ ಕೈಗಳು ಆಯುಧಗಳಾಗಿ ಮಾರ್ಪಟ್ಟಿವೆ. ಇಂತಹ ಆತಂಕಗಳ ನಡುವೆ ನಾವು ಜಾಗೃತರಾಗಿ ಇರುವ ಅಗತ್ಯ ಹೆಚ್ಚಿದೆ ಎಂದರು.

ಹಿಂದಿ ಹೇರಿಕೆ ಖಂಡನೀಯ: ಹಿಂದಿ ಹೇರಿಕೆ ಮಾಡುವ ಕೇಂದ್ರ ಸರ್ಕಾರದ ನೀತಿ ಖಂಡನೀಯ. ಇಂತಹ ಹೇರಿಕೆ ನೀತಿಯಿಂದ ಸ್ಥಳೀಯ ಭಾಷೆ ಬೆಳವಣಿಗೆಗೆ ಅಡ್ಡಿ ಉಂಟಾಗುತ್ತದೆ. ಗಡಿಯಲ್ಲಿ ಮರಾಠಿಗರು ಕನ್ನಡ ಭಾಷಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯ ನಿಲ್ಲಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡಬೇಕು. ಸಾಹಿತ್ಯ ಕೃತಿಗಳನ್ನು ಮುದ್ರಿಸಲು ಶಾಸಕರ ನಿಧಿಯಿಂದ ಆರ್ಥಿಕ ಸಹಕಾರ ನೀಡಲು ಅವಕಾಶವಿದೆ. ಉತ್ತಮ ಕೃತಿಗಳಿಗೆ ಅಗತ್ಯ ಸಹಕಾರ ನೀಡುತ್ತೇನೆ. ಮಕ್ಕಳು, ಯುವಜನರು ಮುದ್ರಿಸುವ ಸಾಹಿತ್ಯ ಪುಸ್ತಕಗಳಿಗೆ ನಾನು ಆರ್ಥಿಕ ಸಹಕಾರ ನೀಡುತ್ತೇನೆ ಎಂದು ಘೋಷಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಕನ್ನಡ ಭಾಷೆ ಮತ್ತು ಸಾಹಿತ್ಯದ ಸಮಸ್ಯೆಗಳು ಕುರಿತು ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ಸಮ್ಮೇಳನಕ್ಕೂ ಮೊದಲು ಉಪವಿಭಾಗಾಧಿಕಾರಿ ಆರ್.ಯತೀಶ್ ರಾಷ್ಟ್ರಧ್ವಜಾರೋಹಣ, ಇಒ ಶಿವಪ್ರಕಾಶ್ ನಾಡಧ್ವಜಾರೋಹಣ, ಕಸಾಪ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ಸಮ್ಮೇಳನದ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಜಿಲ್ಲೆ, ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಸರ್ಕಾರದಿಂದ ಅಗತ್ಯ ನೆರವು ಸಿಗಬೇಕು. ಕೇಂದ್ರ ಸಾಹಿತ್ಯ ಸಮ್ಮೇಳನಕ್ಕೆ 25 ಕೋಟಿ ರೂ. ನೀಡಿದಂತೆ ಜಿಲ್ಲಾ ಸಮ್ಮೇಳನಕ್ಕೆ 25 ಲಕ್ಷ ರೂ., ತಾಲೂಕು ಸಮ್ಮೇಳನಕ್ಕೆ 10 ಲಕ್ಷ ರೂ. ಆರ್ಥಿಕ ಸಹಕಾರ ನೀಡಬೇಕು. ಸಾಗರದಲ್ಲಿ ನಿರ್ಮಾಣ ಆಗುತ್ತಿರುವ ಕನ್ನಡ ಸಾಹಿತ್ಯ ಭವನದ ಕಾಮಗಾರಿಗೆ ಆರ್ಥಿಕ ನೆರವು ನೀಡುತ್ತೇನೆ.
ಗೋಪಾಲಕೃಷ್ಣ ಬೇಳೂರು
ಶಾಸಕ

ನಿಕಟಪೂರ್ವ ತಾಲೂಕು ಅಧ್ಯಕ್ಷ ವಿ.ಗಣೇಶ್, ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಪ್ರಮುಖರಾದ ಬಿ.ಆರ್.ಜಯಂತ್, ಚಂದ್ರಶೇಖರ್ ನಾಯ್ಕ, ಗಣಪತಿ ಮಂಡಗಳಲೆ, ಆರ್.ನಿವಾಸ್, ಕಲಸೆ ಚಂದ್ರಪ್ಪ, ಕನ್ನಪ್ಪ ಬೆಳಲಮಕ್ಕಿ, ನಾದೀರಾ ಪರ್ವಿನ್, ಮಧುಮಾಲತಿ, ಮಹಾಬಲೇಶ್ವರ, ಲಕ್ಷ್ಮಣ್ ಆರ್.ನಾಯ್ಕ, ಟಿ.ಡಿ.ಮೇಘರಾಜ್, ನಾರಾಯಣಮೂರ್ತಿ ಇತರರಿದ್ದರು.

ಕ್ಷೀಣಿಸುತ್ತಿದೆ ಕನ್ನಡ ಸಂವಹನ: ಕನ್ನಡ ಅತ್ಯಂತ ಅರ್ಥಪೂರ್ಣ ಭಾಷೆಯಾಗಿದ್ದು ಮನಸ್ಸಿನ ಭಾವನೆಯನ್ನು ನಮ್ಮ ಭಾಷೆ ಮೂಲಕ ಅಭಿವ್ಯಕ್ತಗೊಳಿಸಿದಾಗ ಹೆಚ್ಚು ಮಹತ್ವ ಸಿಗುತ್ತದೆ ಎಂದು ರಂಗಾಯಣ ನಿರ್ದೇಶಕ ಡಿ.ಪ್ರಸನ್ನ ಹೇಳಿದರು. ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಮಕ್ಕಳಿಗೆ ಕನ್ನಡ ಕಲಿಸುವ, ಕನ್ನಡ ಸಾಹಿತ್ಯ ಕುರಿತು ಆಸಕ್ತಿ ಮೂಡಿಸುವ ಕೆಲಸವಾಗಬೇಕು. ಭಾಷಾ ಅಧ್ಯಯನದ ಬಗ್ಗೆ ಹೆಚ್ಚು ಚಿಂತನೆ ನಡೆಸಬೇಕು ಎಂದು ತಿಳಿಸಿದರು.

ನಮ್ಮೆದುರಿಗಿವೆ ಅನೇಕ ಸವಾಲು: ಸಾಗರ: ಮಲೆನಾಡು ಸಾಹಿತ್ಯವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಸಾಹಿತಿಗಳು ಪ್ರಯತ್ನಶೀಲರಾಗಿದ್ದರೂ ಅನೇಕ ಅಡೆತಡೆಗಳು, ಸಮಸ್ಯೆ-ಸವಾಲುಗಳು ಎದುರಾಗುತ್ತಿವೆ ಎಂದು ಪ್ರಾಧ್ಯಾಪಕ ಡಾ. ಕುಂಸಿ ಉಮೇಶ್ ಹೇಳಿದರು. ಸಮ್ಮೇಳನದಲ್ಲಿ ಮಲೆನಾಡಿನ ಸಾಹಿತ್ಯದ ಪ್ರಸ್ತುತ ಸ್ಥಿತಿಗತಿ ಕುರಿತು ಮಾತನಾಡಿ, ನವೋದಯಕ್ಕಿಂತ ಪೂರ್ವದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಶಿವಮೊಗ್ಗ ಜಿಲ್ಲೆ ನೀಡಿದ ಕೊಡುಗೆ ಅಪಾರವಾಗಿದೆ. ದಲಿತ ಹೋರಾಟ, ರೈತ ಹೋರಾಟ, ಕಾಗೋಡು ಚಳವಳಿಯಂತಹ ಪ್ರಮುಖ ಹೋರಾಟಗಳು ನಡೆದಿವೆ. ಹೋರಾಟಗಳು ಸ್ಫೂರ್ತಿ ನೀಡಿವೆ ಎಂದರು.

ಮಲೆನಾಡಿನ ಪ್ರಸ್ತುತ ತಲ್ಲಣಗಳು ಕುರಿತು ಚಿಂತಕ ಸೀತಾರಾಮ ಕುರುವರಿ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ಮಲೆನಾಡನ್ನು ಹಂತಹಂತವಾಗಿ ನಾಶ ಮಾಡಲಾಗುತ್ತಿದೆ ಎಂದು ತಿಳಿಸಿದರು. ಹಿರಿಯ ಸಾಹಿತಿ ಡಾ. ಜಿ.ಎಸ್.ಭಟ್ ಮಾತನಾಡಿ, ಮಲೆನಾಡಿನ ಪ್ರಸ್ತುತ ಸ್ಥಿತಿಗತಿಗೆ ಕಾರಣ ಏನು ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. ಪ್ರಮುಖರಾದ ಕೆ.ವಿ.ಪ್ರವೀಣ್, ಲಕ್ಷ್ಮಣ್ ಸಾಗರ್, ಸರೋಜಾ ಶೆಟ್ಟಿ, ಚೂಡಾಮಣಿ ರಾಮಚಂದ್ರ, ಕೋದಂಡ ಸಾಗರ, ಜಿ.ಎಚ್.ಶಿವಯೋಗಿ, ಬಿ.ಡಿ.ರವಿಕುಮಾರ್ ಇತರರಿದ್ದರು.

ಯುವಜನರಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸಿ

Share This Article

ಬೇಸಿಗೆಯಲ್ಲಿ ನಿಮ್ಮ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ, ಮೊಸರು ಅಥವಾ ಮಜ್ಜಿಗೆ?Summer Health Tips

  Summer Health Tips: ಬೇಸಿಗೆಯ ಸುಡುವ ಬಿಸಿಲಿನಲ್ಲಿ ಮಧ್ಯಾಹ್ನವಾಗಲಿ ಅಥವಾ ಸಂಜೆಯಾಗಲಿ, ನಮ್ಮ ದೇಹವನ್ನು…

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…