ಆಯನೂರು: ಶಾಲಾ ಕಾಲೇಜುಗಳಲ್ಲಿ ಪಠ್ಯದ ಜತೆ ಮೌಲ್ಯಯುತ ಶಿಕ್ಷಣ ಸಿಗುವಂತಾಗಬೇಕು ಎಂದು ಕೊಡಚಾದ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕೆ.ಪ್ರಭಾಕರ ರಾವ್ ಹೇಳಿದರು.

ಆಯನೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ರೋವರ್ಸ್, ರೇಂಜರ್ಸ್ ಹಾಗೂ ಯುವ ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪದಲ್ಲಿ ಮಾತನಾಡಿ, ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ತಂತ್ರಜ್ಞಾನವನ್ನು ಧನಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮಲ್ಲಿನ ಸಾಮರ್ಥ್ಯ ಅರಿತುಕೊಂಡು ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಕ್ರೀಡೆಯಿಂದ ಉತ್ತಮ ಆರೋಗ್ಯ ನಮ್ಮದಾಗುತ್ತದೆ. ಮೊಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇತ್ತೀಚೆಗೆ ಹೆಚ್ಚಾಗುತ್ತಿರುವ ಸೈಬರ್ ಕ್ರೈಂ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಇತ್ತೀಚೆಗೆ ಬೆಂಕಿ ಅನಾಹುತ ತಪ್ಪಿಸಿದ್ದ ವಿಜಯವಾಣಿ ಪತ್ರಿಕಾ ವಿತರಕ ಶ್ರೇಯಸ್ ಎಸ್. ಮಿರಜ್ಕರ್, ಸ್ವಚ್ಛ ಭಾರತ್ ವಾಹನ ಚಾಲಕಿ ಕುಸುಮಾ ಬಾಯಿ, ಕ್ರೀಡಾ ಸಾಧಕರಾದ ಸಿ.ಅಮೃತಾ, ರಂಜಿತಾ ಹಾಗೂ ಅಂಜನ್ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಡಾ. ಎ.ಗಣೇಶ್ ಭಟ್, ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ. ನಿಜಾಮುದ್ದೀನ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರೊ. ಬಿ.ಸಿ.ಮಹಾದೇವ, ಐಕ್ಯೂಎಸಿ ಕ್ರೀಡಾ ಸಂಚಾಲಕ ಡಾ. ರೋಹನ್ ಡಿಕಾಸ್ಟಾ, ಪ್ರೊ. ಕೀರ್ತಿನಾಥ, ಶಿಲ್ಪಾ ಪಾಟೀಲ್ ಇತರರಿದ್ದರು.