

ಶಿಕಾರಿಪುರ: ಗಡಿಯಲ್ಲಿ ಯುದ್ಧ ನಡೆಯುತ್ತಿದ್ದರೂ ಜನರು ಭಯ, ಆತಂಕಗಳಿಲ್ಲದೆ ನೆಮ್ಮದಿಯಿಂದ ಬದುಕಲು ಕಾರಣ ಸೈನಿಕರ ಪರಿಶ್ರಮ ಎಂದು ಬಂಜಾರ ಸಮಾಜದ ಸಾಲೂರು ಶ್ರೀ ಸೈನಾ ಭಗತ್ ಸ್ವಾಮೀಜಿ ಹೇಳಿದರು.
ಸೈನಿಕರ ಸುಕ್ಷೇಮಕ್ಕಾಗಿ ಮತ್ತು ಹುತಾತ್ಮ ಸೈನಿಕರ ಆತ್ಮಕ್ಕೆ ಶಾಂತಿ ಸಿಗಲು ಪ್ರಾರ್ಥಿಸಿ ಸಾಲೂರಿನ ಮರಿಯಾಗಡ್(ಬಂಜಾರ ಮಠ)ನಿಂದ ತಿರುಪತಿಗೆ ಶಿಷ್ಯರ ಸಹಿತ ಪಾದಯಾತ್ರೆ ಹೊರಟು ಮಾತನಾಡಿ, ಎಲ್ಲ ವೃತ್ತಿಗಳಿಗಿಂತ ಸೈನಿಕ ವೃತ್ತಿ ಪರಮೋಚ್ಚ. ಅವರು ಬದುಕನ್ನು ದೇಶಕ್ಕಾಗಿ ಮುಡಿಪಿಟ್ಟು ಕೆಲಸ ಮಾಡುತ್ತಾರೆ. ಯುದ್ಧ ಸನ್ನಿವೇಶಗಳಲ್ಲಿ ಪ್ರಾಣ ಪಣಕ್ಕಿಟ್ಟು ಹೋರಾಡುತ್ತಾರೆ. ಅವರಿಗೆ ಬದುಕಿಗಿಂತ ದೇಶ ಮುಖ್ಯ. ಅಂತಹ ದೇಶಭಕ್ತ ಸೈನಿಕರು ಭಗವಂತನ ಅನುಗ್ರಹದಿಂದ ಕ್ಷೇಮವಾಗಿ ಬಾಳಬೇಕು ಎಂದು ತಿಳಿಸಿದರು.
ಸೈನಿಕ ದೇಶ ಉಳಿಸಿದರೆ ಮತ್ತು ರೈತ ಆಹಾರ ನಿಡಿ ಜನರ ಪ್ರಾಣ ಉಳಿಸುತ್ತಾನೆ. ಇಬ್ಬರದ್ದು ನಿಸ್ವಾರ್ಥ ಬದುಕು. ಏನೇ ಸಂಕಷ್ಟಗಳು ಬಂದರೂ ಕಾರ್ಯವನ್ನು ಬಿಡುವದಿಲ್ಲ. ಹೊಗಳಿಕೆ ಮತ್ತು ಪ್ರಚಾರ ಬಯಸುವದಿಲ್ಲ ಎಂದು ಬಣ್ಣಿಸಿದರು.
ಎಂಕಪ್ಪ ಪೂಜಾರಿ, ಕುಮಾರ್, ಪ್ರೇಮ್‌ಕುಮಾರ್ ನಾಯಕ್, ಸೋಮಪ್ಪ ಪೂಜಾರಿ, ಮಲ್ಲಿಕ್ ನಾಯಕ್ ಇತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.