

ತೀರ್ಥಹಳ್ಳಿ: ಸಹಕಾರ ಕಾಯ್ದೆಗೆ ತಿದ್ದುಪಡಿ ತರುವ ರಾಜ್ಯ ಸರ್ಕಾರದ ನಿರ್ಧಾರದಿಂದ ಸಹಕಾರ ಕ್ಷೇತ್ರಕ್ಕೆ ತೀವ್ರ ಹಿನ್ನಡೆಯಾಗಲಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿ, ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದ ಸಹಕಾರ ಧೋರಣೆಗೆ ಸರ್ಕಾರ ಹಠಕ್ಕೆ ಬಿದ್ದವರಂತೆ ತಂದಿರುವ ತಿದ್ದುಪಡಿ ಮತ್ತು ಸರ್ಕಾರದ ಹಸ್ತಕ್ಷೇಪ ಭವಿಷ್ಯದಲ್ಲಿ ಮಾರಕವಾಗಿ ಪರಿಣಮಿಸಲಿದೆ ಎಂದು ದೂರಿದರು.
ಸಹಕಾರ ವ್ಯವಸ್ಥೆಗೆ ಸರ್ಕಾರದ ಸಹಕಾರದ ಹೊರತಾಗಿ ಹಸ್ತಕ್ಷೇಪದ ಅಗತ್ಯ ಇರಲಿಲ್ಲ. ಈ ತಿದ್ದುಪಡಿಯಿಂದ ಸಹಕಾರ ತತ್ವದಡಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಹಿನ್ನಡೆಯಾಗಿದೆ. ಪ್ರಜಾತಂತ್ರ ವ್ಯವಸ್ಥೆಯಂತೆ ಸದಸ್ಯರಿಂದ ಆಯ್ಕೆಯಾಗದೆ ಸರ್ಕಾರದ ನಾಮ ನಿರ್ದೇಶನವಂತೂ ಅವೈಜ್ಞಾನಿಕವಾಗಿದೆ. ಡಿಸಿಸಿ ಬ್ಯಾಂಕಿನಲ್ಲೇ ಹಣ ಇಡಬೇಕೆಂಬ ಆದೇಶಕ್ಕೆ ಯಾರು ಹೊಣೆ ಮತ್ತು ಸುರಕ್ಷತೆ ಏನು ಎಂದು ಪ್ರಶ್ನಿಸಿದರು.
ಗುಣಮಟ್ಟಕ್ಕೆ ಹೆಸರಾಗಿದ್ದ ಸ್ಥಳೀಯ ಅಡಕೆ ಗುಣಮಟ್ಟ ಇತ್ತೀಚಿನ ವರ್ಷಗಳಲ್ಲಿ ಕುಸಿಯುತ್ತಿರುವುದು ವಿಷಾಧನೀಯ ಸಂಗತಿ. ಅಧಿಕ ತೇವಾಂಶ ಮತ್ತು ಕಳಪೆ ಗುಣಮಟ್ಟದ ಕಾರಣ ಲಕ್ನೋ ಮಾರುಕಟ್ಟೆಯಿಂದ ನೂರಾರು ಲೋಡ್ ಅಡಕೆ ವಾಪಸ್ ಆಗಿದೆ. ಈ ಬಗ್ಗೆ ರೈತರು ಕಾಳಜಿ ವಹಿಸದಿದ್ದಲ್ಲಿ ಭವಿಷ್ಯ ಕರಾಳವಾದೀತು.
ಆರಗ ಜ್ಞಾನೇಂದ್ರ, ಶಾಸಕ
ಅಡಕೆಯಲ್ಲಿ ಕೇವಲ ಶೇ. 7 ತೇವಾಂಶ ಇರಬೇಕೆಂಬ ನಿಯಮ ಇದ್ದು ಇದನ್ನು ಶೇ.11ಕ್ಕೆ ಸಡಿಲಗೊಳಿಸುವಂತೆ ರಾಜ್ಯದ ಸಂಸದರ ನಿಯೋಗದ ಜತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಅಡಕೆ ವಿರೋಧವಾಗಿ ಷಡ್ಯಂತ್ರ ನಡೆಯುತ್ತಿರುವ ವಿಚಾರವನ್ನು ಬೆಳೆಗಾರರು ಅರಿತಿರಬೇಕು. ಅಡಕೆ ಬೆಳೆಗಾರರ ಬೆನ್ನೆಲುಬಿನಂತಿರುವ ಮ್ಯಾಮ್ಕೋಸ್ ಮತ್ತು ಕ್ಯಾಂಪ್ಕೊ ಸಂಸ್ಥೆಗಳಲ್ಲೇ ವ್ಯವಹರಿಸಬೇಕು ಎಂದರು.
ಪ್ರಾಮಾಣಿಕ ಮತ್ತು ಪಾರದರ್ಶಕ ವ್ಯವಹಾರ ಸಹಕಾರ ಸಂಸ್ಥೆಗಳಿಗೆ ಶೋಭೆ. ರೈತರ ಬೇಡಿಕೆಗೆ ಅನುಗುಣವಾಗಿ ಅನುಕರಣೀಯ ಸಾಧನೆಯೊಂದಿಗೆ 75 ಸಂವತ್ಸರಗಳನ್ನು ಪೂರೈಸಿರುವ ಸಂಸ್ಥೆ ಕಾರ್ಯ ಪ್ರಶಂಸನೀಯ ಎಂದು ತಿಳಿಸಿದರು.
ಸಂಸ್ಥೆ ಅಧ್ಯಕ್ಷ ಕೆ.ನಾಗರಾಜ ಶೆಟ್ಟಿ ಮಾತನಾಡಿ, ಸಂಸ್ಥೆ 3 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು, ಷೇರುದಾರರ ಹಿತಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆಯಲ್ಲಿ ಸದಸ್ಯತ್ವ ಮುಕ್ತವಾಗಿದೆ. ಸದಸ್ಯರು ಸಂಸ್ಥೆಯಲ್ಲೇ ವ್ಯವಹರಿಸಿ ಸಂಸ್ಥೆ ಬೆಳವಣಿಗೆಗೆ ಕಾರಣರಾಗಬೇಕು. ಅಕ್ಟೋಬರ್‌ನಲ್ಲಿ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ ಎಂದರು.
ಸಂಸ್ಥೆ ಉಪಾಧ್ಯಕ್ಷ ಜಾಗಟಗಾರು ಗಿರಿಯಪ್ಪ ಗೌಡ, ಜಿಲ್ಲಾ ಪ್ರತಿನಿಧಿ ಎಚ್.ಎನ್.ವಿಜಯದೇವ್, ವೃತ್ತಿಪರ ನಿರ್ದೇಶಕ ಕೆ.ಎಸ್.ಶಿವಕುಮಾರ್, ಪವಿತ್ರಾ ಚಂದ್ರು, ಕಾರ್ಯದರ್ಶಿ ಜಿ.ರಚನಾ, ನಿರ್ದೇಶಕರು ಇದ್ದರು.