ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ 250 ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆ

01 SGR 02
ಸಾಗರದ ವಿಜಯನಗರ ಬಡಾವಣೆಯಲ್ಲಿ ನವೀಕೃತ ಈಜುಕೊಳದ ಉದ್ಘಾಟನೆ ಹಾಗೂ ಬೇಸಿಗೆ ಈಜು ತರಬೇತಿ ಶಿಬಿರ ಚಾಲನೆ ಕಾರ್ಯಕ್ರಮದಲ್ಲಿ ಶಾಸಕ ಗೊಪಾಲಕೃಷ್ಣ ಬೇಳೂರು, ಗಣಪತಿ ಮಂಡಗಳಲೆ, ಅರವಿಂದ ರಾಯ್ಕರ್, ಮಧುಮಾಲತಿ ಇತರರಿದ್ದರು.
Published on

ಸಾಗರ: ಸಾಗರ ನಗರದ ಪ್ರತಿ ಮನೆಗೂ 24 ತಾಸು ಕುಡಿಯುವ ನೀರು ಪೂರೈಸುವ ಯೋಜನೆ ರೂಪಿಸಿದ್ದು, 250 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರ ಹಣ ಮಂಜೂರಾಗುವ ನಿರೀಕ್ಷೆಯಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ವಿಜಯನಗರ ಬಡಾವಣೆಯಲ್ಲಿ ಯುವ ಸಬಲೀಕರಣ ಇಲಾಖೆಯಿಂದ ನವೀಕೃತ ಈಜುಕೊಳದ ಉದ್ಘಾಟನೆ ಹಾಗೂ ಬೇಸಿಗೆ ಈಜು ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಜನರಿಗೆ ಶುದ್ಧ ಕುಡಿಯುವ ನೀರನ್ನು ಶರಾವತಿ ಹಿನ್ನೀರಿನಿಂದ ತರುವ ಯೋಜನೆ ಇನ್ನಷ್ಟು ಸಶಕ್ತಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ವಿಜಯನಗರ ಬಡಾವಣೆಯ ಈಜುಕೊಳಕ್ಕೆ 2008ರಲ್ಲಿ ನನ್ನ ಅವಧಿಯಲ್ಲಿ 2 ಕೋಟಿ ರೂ. ಅನುದಾನ ಮಂಜೂರಾಗಿತ್ತು. ನಂತರ ಕಾಗೋಡು ತಿಮ್ಮಪ್ಪ ಅವರು 50 ಲಕ್ಷ ರೂ. ಅನುದಾನ ಮಂಜೂರು ಮಾಡಿಸಿದ್ದರು. ನಂತರ ಬಂದವರು ತರಾತುರಿಯಲ್ಲಿ ಈಜುಕೋಳ ಉದ್ಘಾಟಿಸಿದ್ದರು. ಆದರೆ ವ್ಯವಸ್ಥೆ ಪರಿಶೀಲಿಸಿರಲಿಲ್ಲ. ಈಜುಕೊಳ ಸಂಪೂರ್ಣ ಹಾಳಾಗಿ ಮೂರು ವರ್ಷ ಮುಚ್ಚಲಾಗಿತ್ತು ಎಂದರು.

ಸಿಂಗಾಪುರ ಮಾದರಿಯಲ್ಲಿ ಜೋಗ ಜಲಪಾತ ಸಮೀಪ ಗ್ಲಾಸ್ ಹೌಸ್ ನಿರ್ಮಿಸುವ ಆಲೋಚನೆಯಿದೆ. ಸದ್ಯದಲ್ಲಿಯೇ ಸಿಂಗಾಪೂರಕ್ಕೆ ಹೋಗುವ ಉದ್ದೇಶವಿದೆ. 190 ಕೋಟಿ ರೂ. ವೆಚ್ಚದಲ್ಲಿ ಜೋಗ ಜಲಪಾತ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಆರಂಭಿಕ 90 ಕೋಟಿ ರೂ. ಮಂಜೂರಾಗಿದೆ. ಪ್ರವಾಸೋದ್ಯಮ ಹಾಗೂ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಅಗತ್ಯ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಗೋಪಾಲಕೃಷ್ಣ ಬೇಳೂರು

ಶಾಸಕ

ಶಾಸಕನಾಗಿ ಮತ್ತೆ ಆಯ್ಕೆಯಾದ ಬಳಿಕ ಮಕ್ಕಳಿಗೆ ಈಜು ತರಬೇತಿ ಅಗತ್ಯತೆ ಮನಗಂಡು 49 ಲಕ್ಷ ರೂ. ಮಂಜೂರು ಮಾಡಿಸಿ ಈಜುಕೊಳ ನವೀಕರಣ ಮಾಡಿಸಿದ್ದೇನೆ. ಮಕ್ಕಳು ಬೇಸಿಗೆ ರಜೆ ಸಂದರ್ಭ ನದಿ ಕೆರೆಗಳಿಗೆ ಈಜಲು ಹೋಗಿ ಅಪಾಯ ತಂದುಕೊಳ್ಳುತ್ತಾರೆ. ಪಾಲಕರು ಮಕ್ಕಳನ್ನು ಈಜುಕೊಳಕ್ಕೆ ಕಳುಹಿಸಿ ತರಬೇತಿ ಕೊಡಿಸಬೇಕು ಎಂದು ತಿಳಿಸಿದರು.

ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಅರವಿಂದ ರಾಯ್ಕರ್, ಮಧುಮಾಲತಿ, ನಾದಿರಾ, ಉಷಾ ಗುರುಮೂರ್ತಿ, ಉಮೇಶ್, ಜಾಕೀರ್, ಕುಸುಮಾ ಸುಬ್ಬಣ್ಣ, ಶಂಕರ ಅಳ್ವಿಕೋಡಿ, ಎಲ್.ಚಂದ್ರಪ್ಪ, ಹಮೀದ್, ಸರಸ್ವತಿ ನಾಗರಾಜ್, ರವಿಕುಮಾರ್, ಪ್ರಮುಖರಾದ ಎಂ.ಆರ್.ಹುಚ್ಚಪ್ಪ, ರೇಖ್ಯಾ ನಾಯ್ಕ, ಕಲಸೆ ಚಂದ್ರಪ್ಪ, ಶ್ರೀಧರ ಅವಧಾನಿ, ಪೌರಾಯುಕ್ತ ಎಚ್.ಕೆ.ನಾಗಪ್ಪ, ಎಚ್.ಜಿ.ಸುಬ್ರಹ್ಮಣ್ಯ ಭಟ್, ದಿನೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net