ಗತದ ಮೌಲ್ಯ ತೆರೆದಿಡುವ ನನ್ನೂರಿನ ಶ್ರೀಸಾಮಾನ್ಯರು

4 tth 01
ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಕಡಿದಾಳ್ ಪ್ರಕಾಶ್ ಅವರ ನನ್ನೂರಿನ ಶ್ರೀಸಾಮಾನ್ಯರು ಕೃತಿಯನ್ನು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಬಿಡುಗಡೆಗೊಳಿಸಿದರು. ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಜಿ.ಎನ್.ಮೋಹನ್ ಇದ್ದರು.
Published on

ತೀರ್ಥಹಳ್ಳಿ: ಪ್ರಸ್ತುತ ಸಮಾಜಮುಖಿ ವ್ಯವಸ್ಥೆ ದೂರವಾಗಿ ಏಕವ್ಯಕ್ತಿ ಕೇಂದ್ರಿತ ವ್ಯವಸ್ಥೆ ನಮ್ಮಲ್ಲಿದೆ. ಮಹಾತ್ಮ ಗಾಂಧಿ ಅವರ ಏಕದಶ ಸೂತ್ರದಂತೆ ಎಲ್ಲ ವೃತ್ತಿಗಳಲ್ಲೂ ವೃತ್ತಿಧರ್ಮದ ದಿಕ್ಕುಗಳಿರಬೇಕು ಎಂದು ಪದ್ಮಶ್ರೀ ಪುರಸ್ಕೃತ, ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.

ಪಟ್ಟಣದ ಶಾಂತವೇರಿ ಗೋಪಾಲ ಗೌಡ ರಂಗಮಂದಿರದಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅವರ ‘ನನ್ನೂರಿನ ಶ್ರೀಸಾಮಾನ್ಯರು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಸಾಮಾನ್ಯರ ಅಸಾಮಾನ್ಯ ಬುದ್ಧಿವಂತಿಕೆ, ಪ್ರಾಮಾಣಿಕತೆ, ಚಾಕಚಕ್ಯತೆಗಳ ವ್ಯಕ್ತಿತ್ವದ ಅನಾವರಣ ಕೃತಿಯಲ್ಲಿ ಬಿಂಬಿತವಾಗಿವೆ. ಗತವು ಪ್ರಸ್ತುತವಾಗುವ ಪಠ್ಯದ ಚಿತ್ರಣವನ್ನು ಕಾಣಬಹುದು. ಗತದ ನಡೆಯೊಂದಿಗೆ ಮೌಲ್ಯವನ್ನು ಬಿಚ್ಚಿಡುವ ಪ್ರಯತ್ನ ಹಾಗೂ ಸಂವಾದಕ್ಕೆ ಆಹ್ವಾನಿಸುವ ಬರವಣಿಗೆ ಕೃತಿಯಲ್ಲಿದೆ. ಸಾಂಸ್ಕೃತಿಕ ನೆಲೆಯು ಗತದ ವೈಭವೀಕರಣವಿಲ್ಲದೆ ದಾಖಲಾಗಿದೆ ಎಂದು ತಿಳಿಸಿದರು.

ಕಡಿದಾಳ್ ಪ್ರಕಾಶ್ ಅವರ ನಾ ಕಂಡಂತೆ ತೇಜಸ್ವಿ-ಶ್ಯಾಮಣ್ಣ ಕೃತಿಯ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್, ಕೃತಿಯ ಕನ್ನಡಿಯಲ್ಲಿ ತೇಜಸ್ವಿ, ಶ್ಯಾಮಣ್ಣ ಮತ್ತು ಪ್ರಕಾಶ್ ಅವರ ಪ್ರತಿಬಿಂಬವಿದೆ. ಸಂಬಂಧಗಳ ಗ್ರಹಿಸುವಿಕೆಯೊಂದಿಗೆ ಜನರ ಮೆರವಣಿಗೆ ಕಾಣಬಹುದು. ಇದೊಂದು ಜುಗಲ್ಬಂದಿ ಕೃತಿ. ಸಾಮಾನ್ಯ ಮತ್ತು ಅಸಾಮಾನ್ಯರ ನಡುವಿನ ಪಾತ್ರಗಳು ಚಿತ್ತಾರ ಮೂಡಿಸಿವೆ. ವಿಶೇಷ ಕೃತಿಯಾಗಿ ಓದುಗರನ್ನು ಆಕರ್ಷಿಸುವ ಗುಣ ಹೊಂದಿದೆ ಎಂದರು.

ಕಟ್ಟುವ ಹಾದಿಯಲ್ಲಿ ಕುವೆಂಪು ಪ್ರತಿಷ್ಠಾನ: ಉಗಮ-ವಿಕಾಸ ಕೃತಿ ಕುರಿತು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅಭಿಪ್ರಾಯ ಮಂಡಿಸಿ, ದೇಶದಲ್ಲಿ ಕವಿಯೊಬ್ಬರ ಹೆಸರಲ್ಲಿ ನಿರ್ಮಾಣಗೊಂಡು ಉತ್ಕೃಷ್ಟವಾಗಿ ಸಾಗಿಬಂದ ಕುವೆಂಪು ಪ್ರತಿಷ್ಠಾನದ ಬಗ್ಗೆ ವಿಶ್ಲೇಷಿಸಿದರು. ಶಾಸಕ ಆರಗ ಜ್ಞಾನೇಂದ್ರ, ಕೃತಿಕಾರ ಕಡಿದಾಳ್ ಪ್ರಕಾಶ್, ಗಾಯಕ ಅರವಿಂದ್, ಸತ್ಯನಾರಾಯಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net