ಶಿಕಾರಿಪುರ: ಪವಿತ್ರ ಗಂಗೆಯನ್ನು ಭೂಮಿಗೆ ತಂದ ಭಗೀರಥರು ಸಂಕಲ್ಪ ಭಾವದಿಂದ ಆಧ್ಯಾತ್ಮಿಕ ಶಕ್ತಿ ಹಾಗೂ ಛಲದ ಪ್ರತೀಕವಾಗಿ ನಮಗೆ ಕಾಣುತ್ತಿದ್ದಾರೆ ಎಂದು ಶಿರಸ್ತೇದಾರ್ ವಿನಯ್ ಆರಾಧ್ಯ ಹೇಳಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಉಪ್ಪಾರ ಸಮಾಜ, ತಾಲೂಕು ಆಡಳಿತ ಹಾಗೂ ಪುರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಬದುಕಿನಲ್ಲಿ ನಮಗೆ ಯಶಸ್ಸು ಸಾಧಿಸಲು ಇಂತಹ ಶ್ರೇಷ್ಠ ಗುಣ ಅಗತ್ಯ. ಮನುಷ್ಯನ ಸಾಧನೆಯು ಪರಿಶ್ರಮ ಮತ್ತು ಬದುಕುವ ಶೈಲಿ ಮೇಲೆ ನಿರ್ಧಾರವಾಗುತ್ತದೆ ಎಂದು ತಿಳಿಸಿದರು.
ಉಪ್ಪಾರ ಸಮಾಜದ ಅಧ್ಯಕ್ಷ ಹವಳಪ್ಪ ಮಾತನಾಡಿ, ನಮ್ಮ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಹಳಷ್ಟು ಹಿಂದುಳಿದಿದೆ. ಸಮಾಜದ ಜನರು ಸಂಘಟಿತರಾಗಬೇಕು. ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ನೀಡಬೇಕು. ಸಮಾಜದ ಜನರು ಶಿಕ್ಷಣದ ಜತೆಗೆ ಕೌಶಲ ವೃತ್ತಿಗಳಿಗೂ ಆದ್ಯತೆ ನೀಡಬೇಕು. ಭಗೀರಥ ಮಹಾರಾಜರ ಬದುಕು ನಮಗೆ ಸ್ಪೂರ್ತಿ ಎಂದರು.
ಉಪ್ಪಾರ ಸಮಾಜದ ಗಿರೀಶ್‌ಕುಮಾರ್ ಅವರು ಭಗೀರಥರ ಬದುಕಿನ ಬಗ್ಗೆ ಉಪನ್ಯಾಸ ನೀಡಿದರು. ಸಮಾಜದ ಮುಖಂಡರಾದ ಸುಭಾಷ್, ಸಿದ್ದಪ್ಪ, ಪುರಸಭೆ ಕಚೇರಿ ವ್ಯವಸ್ಥಾಪಕ ರಾಜ್‌ಕುಮಾರ್, ಪ್ರವೀಣ್ ಇತರರಿದ್ದರು.