

ಶಿಕಾರಿಪುರ: ಕೃಷಿಮೇಳಗಳಿಂದ ರೈತರಿಗೆ ದೇಸಿ ಹಾಗೂ ಆಧುನಿಕ ಕೃಷಿ ಪದ್ಧತಿಗಳ ಪರಿಚಯವಾಗುತ್ತದೆ. ರೈತರ ಮುಖದಲ್ಲಿ ಸಂತಸ ಮೂಡಿದರೆ ದೇಶ ಸಂಪದ್ಭರಿತವಾಗುತ್ತದೆ ಎಂದು ಸುರಗಿಹಳ್ಳಿ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ಇರುವಕ್ಕಿ ಕೃಷಿ ವಿಶ್ವವಿದ್ಯಾಲಯ, ಸ್ಥಳೀಯ ಗ್ರಾಮ ಪಂಚಾಯಿತಿ, ರೈತ ಸಂಘಟನೆಗಳು ಆಯೋಜಿಸಿದ್ದ ಕೃಷಿ ಮೇಳ ಉದ್ಘಾಟಿಸಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ಆಗುತ್ತಿವೆ. ಹೊಸ ತಳಿಗಳು ಬರುತ್ತಿವೆ. ತಂತ್ರಜ್ಞಾನ ಸಹಾಯದಿಂದ ಇಳುವರಿ ಹೆಚ್ಚಾಗುತ್ತಿದೆ. ದೇಶ-ವಿದೇಶಗಳ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಚಿವ ಮಧು ಬಂಗಾರಪ್ಪ ಮಾತನಾಡಿ, ಸರ್ಕಾರಗಳು ರೈತರ ಹಿತ ಕಾಪಾಡಲು ಬದ್ಧವಾಗಿವೆ. ಸಾವಯವ ಮತ್ತು ಸಾಂಪ್ರದಾಯಿಕ ಕೃಷಿ ಕಡೆಗೆ ಹೆಚ್ಚಿನ ಒಲವು ತೋರಬೇಕು. ನಮ್ಮ ದೇಸಿ ಪದ್ಧತಿ ಉಳಿಸಬೇಕು. ರಾಸಾಯನಿಕಗಳ ಬಳಕೆಯನ್ನು ರೈತರು ಕಡಿಮೆ ಮಾಡಬೇಕು. ಸಾಂಪ್ರದಾಯಿಕ ಗೊಬ್ಬರ ಬಳಕೆ ಹೆಚ್ಚಾಗಬೇಕು. ಗ್ರಾಮ ಮಟ್ಟದಲ್ಲಿ ಕೃಷಿ ಮೇಳಗಳು ನಡೆದರೆ ರೈತರಿಗೆ ತುಂಬ ಉಪಯುಕ್ತ ಎಂದರು.
ತಾಲೂಕಿನಲ್ಲಿ ರೈತರು ಹೆಚ್ಚು ಅಡಕೆ ತೋಟ ನಿರ್ಮಾಣ ಮಾಡುತ್ತಿದ್ದಾರೆ. ರೈತರು ದೀರ್ಘಕಾಲದ ಬೆಳೆಗಳ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಋತುಮಾನಗಳಿಗೆ ತಕ್ಕಹಾಗೆ ಮಿಶ್ರ ಬೆಳೆಗಳನ್ನು ಬೆಳೆಯುವುದರಿಂದ ಅನುಕೂಲವಾಗುತ್ತದೆ ಎಂದು ಹೇಳಿದರು.
ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ ಮಾತನಾಡಿ, ಕೃಷಿ ವಿವಿ ಸ್ಥಾಪನೆಯಿಂದ ಕೃಷಿ ಕ್ಷೇತ್ರಕ್ಕೆ ಸಹಕಾರಿಯಾಗಿದೆ. ರೈತರು ಮಿಶ್ರ ಬೆಳೆಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಸ್.ಪಿ.ನಾಗರಾಜ ಗೌಡ, ಕೃಷಿ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್, ಭದ್ರಾ ಕಾಡಾ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ, ಸದಸ್ಯ ಮಾರವಳ್ಳಿ ಉಮೇಶ್ ಇದ್ದರು.