

ಸೊರಬ: ಅರ್ಥಪೂರ್ಣ ಬದುಕಿಗೆ ಆಧ್ಯಾತ್ಮಿಕ ಚಿಂತನೆ ಹಾಗೂ ವೈಚಾರಿಕ ಬುನಾದಿ ಅಳವಡಿಸಿಕೊಳ್ಳಬೇಕು ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಮುರುಘಾ ಮಠದಲ್ಲಿ ಶ್ರೀ ಕುಮಾರಪ್ರಭು ಮಹಾಸ್ವಾಮಿಗಳ ಸ್ಮಾರಕ ಟ್ರಸ್ಟ್ನಿಂದ ಹಮ್ಮಿಕೊಂಡಿದ್ದ ಚೌಡೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ಮಠದ ನೂತನ ಕಟ್ಟಡ ಪ್ರವೇಶೋತ್ಸವ, ವಾರ್ಷಿಕೋತ್ಸವ ಹಾಗೂ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪ್ರತಿಯೊಬ್ಬರ ಜೀವನದಲ್ಲೂ ಕಾಯಕ ನಿಷ್ಠೆ ಮುಖ್ಯ. ಬದುಕನ್ನು ಸುಂದರವಾಗಿಸಲು ಕಾಯಕ, ಶ್ರದ್ಧೆ, ದಾಸೋಹ ಅಗತ್ಯ. ಬಸವಾದಿ ಶಿವಶರಣರು ಮನುಷ್ಯನಿಗೆ ಕಾಯಕ ಮುಖ್ಯ. ಮಾಡುವ ಕಾಯಕದಿಂದ ಭಗವಂತನನ್ನು ಕಾಣಲು ಸಾಧ್ಯ ಎಂದು ತಿಳಿಸಿದರು. ಐಸಿಎಆರ್ ಸಂಶೋಧನೆಗೆ (ಕೃಷಿ ವಿಜ್ಞಾನಿ) ಆಯ್ಕೆಯಾದ ತಾಲೂಕಿನ ಅಂಡಗಿ ಗ್ರಾಮದ ಡಾ. ಎಂ.ಜಿ.ಪ್ರತಾಪ್ ಹಾಗೂ ಸೈನಿಕ ಜಿ.ಆರ್.ಪ್ರಭುದೇವ ಅವರನ್ನು ಸನ್ಮಾನಿಸಲಾಯಿತು.
ದುಂಡಸಿ ಮಠದ ಶ್ರೀ ಕುಮಾರ ಸ್ವಾಮೀಜಿ, ಟೌನ್ ವೀರಶೈವ ಘಟಕದ ಅಧ್ಯಕ್ಷ ವಿಶ್ವನಾಥ ಗೌಡ, ಪ್ರತಾಪ್, ಪ್ರಭುದೇವ, ಜಗದೀಶ್ ಸಣ್ಣಲಿಂಗಣ್ಣನವರ್, ಮಠದ ಕಾರ್ಯದರ್ಶಿ ಡಿ.ಶಿವಯೋಗಿ, ಉದ್ಯಮಿ ನಾಗರಾಜ್ ಗುತ್ತಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮಧ್ಯ ಕರ್ನಾಟಕದ ಅಧ್ಯಕ್ಷ ಸಿ.ಪಿ.ಈರೇಶ ಗೌಡ, ಚಂದ್ರಶೇಖರ್ ನಿಜಗುಣ, ಲಿಂಗರಾಜ್, ರೇಖಾ ಜಗದೀಶ್, ರೇಣುಕಮ್ಮ ಗೌಳಿ, ಜಯಮಾಲಾ, ಪೂರ್ಣಿಮಾ ಇತರರಿದ್ದರು.