

ತೀರ್ಥಹಳ್ಳಿ: ಗ್ರಾಮೀಣ ವಾತಾವರಣ ಮರುನಿರ್ಮಾಣದಲ್ಲಿ ಯುವಜನತೆ ಪಾತ್ರ ನಿರ್ಣಾಯಕ ಎಂದು ಚಿಂತಕಿ ಸುನಂದಾ ಜಯರಾಮ್ ಅಭಿಪ್ರಾಯಪಟ್ಟರು.
ಗಾಂಧಿ ತತ್ವ ಪ್ರಣೀತ ರಾಜ್ಯಮಟ್ಟದ ಯುವಜನ ಶಿಬಿರ, ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಸಂಸ್ಮರಣೆ ಅಂಗವಾಗಿ ತಾಲೂಕಿನ ಹಾರೋಗುಳಿಗೆಯಲ್ಲಿರುವ ಕಡಿದಾಳು ಮಂಜಪ್ಪ ಸಭಾಭವನದಲ್ಲಿ ಏರ್ಪಡಿಸಿರುವ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಮಾತನಾಡಿ, ವಿದ್ಯಾವಂತರು ಹಳ್ಳಿಗಳಿಗೆ ಮರಳುವ ಅಗತ್ಯವಿದೆ. ಮಹಾತ್ಮ ಗಾಂಧಿ ಅವರ ಆಶಯದಂತೆ ಗ್ರಾಮ ರಾಜ್ಯದ ಮರು ನಿರ್ಮಾಣದ ಅಗತ್ಯವಿದೆ ಎಂದು ತಿಳಿಸಿದರು.
ಆಧುನಿಕತೆ ಆಕರ್ಷಣೆಯಿಂದ ಗ್ರಾಮೀಣ ಭಾಗದ ಯುವಜನತೆ ಕೃಷಿ ಮತ್ತು ಕೌಟುಂಬಿಕ ಬದುಕು ಮರೆತ ಪರಿಣಾಮ ಹಳ್ಳಿಗಳು ಅನಾಥ ಸ್ಥಿತಿ ತಲುಪುವಂತಾಗಿದೆ. ಮದ್ಯಪಾನ, ಜೂಜು ಮುಂತಾದ ಹವ್ಯಾಸಗಳು ಹಳ್ಳಿಗಳ ನಾಶಕ್ಕೆ ಕಾರಣವಾಗುತ್ತಿವೆ. ವಿಜ್ಞಾನ, ವೈಚಾರಿಕತೆ ಮರೆತು ಕೆಟ್ಟ ಶಕ್ತಿಗಳ ಪ್ರವೇಶದಿಂದ ಜಾತಿಧರ್ಮದ ಪಿಡುಗು ಸೃಷ್ಟಿಯಾಗಿ ಹಳ್ಳಿಗಳ ಶ್ರೀಮಂತವಾದ ಸತ್ಸಂಪ್ರದಾಯಗಳು ನಶಿಸಿಹೋಗುತ್ತಿವೆ ಎಂದರು.
ರೈತ ಮುಖಂಡ ಕೆ.ಬೋರಯ್ಯ ಮಾತನಾಡಿ, ವಿದ್ಯೆ ಕಲಿತವರು ಹಳ್ಳಿ ಜತೆಗೆ ಹೆತ್ತವರನ್ನೂ ಮರೆತಿದ್ದಾರೆ. ಇದರ ಪರಿಣಾಮ ಹಿರಿಯರು ಅನಾಥರಾಗುವ ಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಕೃಷ್ಣಪ್ಪ ಹೊಳೆಕೊಪ್ಪ ಮಾತನಾಡಿ, ಯುವಜನತೆಗೆ ಪ್ರೇರಣೆಯಾಗುವಂತೆ ಅನುಕರಣೀಯ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಸಂಸ್ಮರಣೆಯನ್ನು ಶಿಬಿರದಲ್ಲಿ ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದರು. ಹಾರೋಗುಳಿಗೆ ಗ್ರಾಪಂ ಸದಸ್ಯೆ ಇಂದಿರಮ್ಮ, ಸಾಮಾಜಿಕ ಕಾರ್ಯಕರ್ತ ಕೆ.ಜಿ.ಶ್ರೀನಿವಾಸ್, ತುಂಗಾ ವಿದ್ಯಾವರ್ಧಕ ಸಂಘದ ನಿರ್ದೇಶಕ ಡಾನ್ ರಾಮಣ್ಣ ಇದ್ದರು.