

ಸಾಗರ: ಪ್ರಾಮಾಣಿಕವಾಗಿ ಕೆಲಸ ಮಾಡುವ ಅಂಚೆ ಇಲಾಖೆ ಬಗ್ಗೆ ಜನರಲ್ಲಿ ಅಪಾರ ನಂಬಿಕೆ ಇದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಭೀಮನಕೋಣೆಯಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದಿಂದ ಏರ್ಪಡಿಸಿದ್ದ 3ನೇ ದ್ವೈವಾರ್ಷಿಕ ಶಿವಮೊಗ್ಗ ವಿಭಾಗೀಯ ಅಧಿವೇಶನ ಉದ್ಘಾಟಿಸಿ ಮಾತನಾಡಿ, ಅಂಚೆ ಇಲಾಖೆಯಿಂದ ಜನರಿಗೆ ಲಭ್ಯವಾಗುವ ಅನೇಕ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ. ಸರ್ಕಾರದಿಂದ ಜನಸಾಮಾನ್ಯರಿಗೆ ಅನುಕೂಲವಾಗುವ ಯೋಜನೆಗಳು ಕೂಡ ಅಂಚೆ ಇಲಾಖೆ ಕಾರ್ಯದ ಭಾಗವಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಇಂದಿಗೂ ಗ್ರಾಮೀಣ ಅಂಚೆ ಸೇವಕರ ಜೀವನ ಸುಧಾರಿಸುವ ಪ್ರಯತ್ನ ಮಾಡಿಲ್ಲ. ಕಡ್ಡಾಯ ಕೆಲಸವಾದರೂ ಮೂಲ ಸೌಲಭ್ಯ ಮರೀಚಿಕೆಯಾಗಿದೆ. ಅತ್ಯಂತ ಕಡಿಮೆ ವೇತನಕ್ಕೆ ಕೆಲಸ ಮಾಡುವ ಅನಿವಾರ್ಯತೆ ಇದೆ. ಇಂತಹ ಅಧಿವೇಶನ ಸಂಘಟನೆಗೆ ಬಲ ನೀಡಿ ಸರ್ಕಾರದ ಗಮನ ಸೆಳೆಯುವುದಕ್ಕೆ ಸಹಕಾರಿ ಎಂದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಘದ ಕರ್ನಾಟಕ ವಲಯ ಕಾನೂನು ಸಲಹೆಗಾರ ಎಸ್.ಎಸ್.ಮಂಜುನಾಥ್, ನಮ್ಮಲ್ಲಿ ಶಿಸ್ತು, ಬದ್ಧತೆ, ಪ್ರಾಮಾಣಿಕತೆ ಎಂದೂ ಬದಲಾಗಬಾರದು. ಸಂಘಟನೆಗೂ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ವಲಯ ಮಾಜಿ ಅಧ್ಯಕ್ಷ ಪ್ರಹ್ಲಾದ್ ರಾವ್ ಅವರನ್ನು ಗೌರವಿಸಲಾಯಿತು. ವಿಭಾಗೀಯ ಅಧ್ಯಕ್ಷ ಎಚ್.ಜಿ.ವೆಂಕಟೇಶ್, ಸಂಘದ ನವದೆಹಲಿ ಜನರಲ್ ಸೆಕ್ರೆಟರಿ ಎಸ್.ಎಸ್.ಮಹಾದೇವಯ್ಯ, ಸಾಗರ ಅಂಚೆ ನಿರೀಕ್ಷಕ ಧನಂಜಯ ಗೌಡ, ವಿಭಾಗೀಯ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ, ಮಾಜಿ ಕಾರ್ಯಾಧ್ಯಕ್ಷ ಪ್ರಕಾಶ್ ರಾವ್, ಭೀಮನಕೋಣೆ ಗ್ರಾಪಂ ಅಧ್ಯಕ್ಷ ನಾಗರಾಜ್ ಇತರರಿದ್ದರು.