ಆನಂದಪುರ: ಕೃಷಿ ಸಂಶೋಧನೆಗಳಲ್ಲಿ ತೊಡಗಿರುವ ವಿಜ್ಞಾನಿಗಳು ಒಟ್ಟುಗೂಡಿ ರೈತರು ಎದುರಿಸುತ್ತಿರುವ ಕೃಷಿ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಬೇಕು ಎಂದು ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ಹೇಳಿದರು.
ಸಮೀಪದ ಇರುವಕ್ಕಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಆವರಣದಲ್ಲಿ ಆಯೋಜಿಸಿದ್ದ ಶಿವಮೊಗ್ಗ ವಲಯ ಸಂಶೋಧನಾ ಮತ್ತು ವಿಸ್ತರಣಾ ಕಾರ್ಯಾಗಾರದಲ್ಲಿ ಮಾತನಾಡಿ, ಅತ್ಯಂತ ಪರಿಶ್ರಮದಿಂದ ಕೃಷಿ ನಡೆಸುತ್ತಿರುವ ರೈತರು ವಿವಿಧ ಬಗೆಯ ಸವಾಲುಗಳನ್ನು ಎದುರಿಸುತ್ತಿದ್ದಾರೆ. ವೈರಸ್, ಂಗಸ್, ಕೀಟ ಮತ್ತು ಕಾಡು ಪ್ರಾಣಿಗಳ ಹಾವಳಿ ರೈತರನ್ನು ಕಂಗೆಡಿಸಿವೆ. ಎಲ್ಲ ಸವಾಲು ಮೀರಿ ಉತ್ತಮ ಸಲು ಬೆಳೆದರೆ, ಕೊನೆಗೆ ಮಾರುಕಟ್ಟೆ ಸಮಸ್ಯೆ ಕಾಡುತ್ತವೆ ಎಂದು ತಿಳಿಸಿದರು.
ಲಾಭದಾಯಕ ಕೃಷಿ ಸವಾಲಿನಿಂದ ಕೂಡಿದೆ. ಸೂಕ್ಷ್ಮ ಸಮಸ್ಯೆಗಳ ಪರಿಹಾರಕ್ಕೆ ಕೃಷಿ ವಿಜ್ಞಾನಿಗಳು, ಸಂಶೋಧಕರು, ಮಾರುಕಟ್ಟೆ ತಜ್ಞರು ಒಂದಾಗಿ ಚರ್ಚಿಸಬೇಕು. ಜಮೀನುಗಳಿಗೆ ಭೇಟಿ ನೀಡಿ ಸಮಸ್ಯೆಗಳ ಪ್ರತ್ಯಕ್ಷ ಅನುಭವ ಪಡೆಯಬೇಕು. ಪರಿಸರ ಆಧಾರಿತ ಕೃಷಿ ಮತ್ತು ಸಾವಯವ ಬೆಳೆಗಳ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡಬೇಕು.
ಡಾ. ಆರ್.ಸಿ.ಜಗದೀಶ್
ಕೃಷಿ ವಿವಿ ಕುಲಪತಿ
ಕಾರ್ಯಾಗಾರದಲ್ಲಿ ವಲಯ 9ರ ತೀರ್ಥಹಳ್ಳಿ, ಶೃಂಗೇರಿ ಮತ್ತು ಇರುವಕ್ಕಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 50ಕ್ಕೂ ಹೆಚ್ಚು ವಿವಿಧ ವಿಷಯಗಳ ವಿಜ್ಞಾನಿಗಳು ಭಾಗವಹಿಸಿ ಸಂಶೋಧನೆಗಳ ವರದಿ ಮಂಡಿಸಿದರು. ಪ್ರಸ್ತುತ ವರ್ಷ ರೈತರ ಅವಶ್ಯಕತೆಗೆ ಅನುಗುಣವಾಗಿ ಕೈಗೊಳ್ಳಬೇಕಾದ ಸಂಶೋಧನೆಗಳ ಬಗ್ಗೆ ಚರ್ಚಿಸಿದರು. ವಿವಿ ಅಧಿಕಾರಿಗಳು ಮತ್ತು ಕೃಷಿ, ತೋಟಗಾರಿಕೆ ಇಲಾಖಾ ಮುಖ್ಯ ಅಧಿಕಾರಿಗಳು ಪಾಲ್ಗೊಂಡು ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಮತ್ತು ಪರಿಹಾರ ಮಾರ್ಗಸೂಚಿ ಬಗ್ಗೆ ಚರ್ಚಿಸಿದರು.
ಸಾಗರ ತಾಲೂಕು ಉಪ ಕೃಷಿ ನಿರ್ದೇಶಕ ಕೆ.ಆರ್.ಲೋಕೇಶ್, ಸಾಗರ ತಾಲೂಕು ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಮಹಾಬಲೇಶ್ವರ ಬೇಲೂರು, ವಿವಿ ಕುಲಸಚಿವ ಡಾ. ಕೆ.ಸಿ.ಶಶಿಧರ್, ಶಿಕ್ಷಣ ನಿರ್ದೇಶಕ ಡಾ. ಬಿ.ಹೇಮ್ಲಾನಾಯಕ್, ವಿಸ್ತರಣಾ ನಿರ್ದೇಶಕ ಡಾ. ಕೆ.ಟಿ.ಗುರುಮೂರ್ತಿ, ಸಂಶೋಧನಾ ನಿರ್ದೇಶಕ ಡಾ. ಬಿ.ಎಂ.ದುಶ್ಯಂತ್‌ಕುಮಾರ್, ಸಹ ಸಂಶೋಧನಾ ನಿರ್ದೇಶಕ ಡಾ. ಪ್ರದೀಪ್, ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜು ಡೀನ್ ಡಾ. ಎನ್.ಪ್ರಕಾಶ್ ಇತರರಿದ್ದರು.