ಸೊರಬ: ಸಮಾಜದಲ್ಲಿ ಮಹಿಳೆಯರಿಗೆ ಸವಾಲುಗಳು ಹೆಚ್ಚಿದ್ದು, ಸಮರ್ಥವಾಗಿ ಎದುರಿಸುವ ಅವಕಾಶಗಳನ್ನು ನೀಡಿದಾಗ ಮತ್ತಷ್ಟು ಬಲಗೊಳ್ಳಲು ಸಾಧ್ಯ ಎಂದು ದಂತ ವೈದ್ಯ ಡಾ. ಎಚ್.ಇ.ಜ್ಞಾನೇಶ್ ಹೇಳಿದರು.
ಪಟ್ಟಣದ ಮುರುಘಾ ಮಠದಲ್ಲಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಮಂಡಲದಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಮಹಿಳಾ ಆರ್ಥಿಕ ಸಬಲೀಕರಣ ಹಾಗೂ ಅಂಗಾಂಗ ದಾನ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ರಾಜ್ಯಪಾಲ, ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದ ನಿದರ್ಶನಗಳಿವೆ. ಮಹಿಳೆಯರಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹೆಚ್ಚಿನ ಸ್ಥಾನಮಾನ ನೀಡಬೇಕು. ಸೊರಬದಲ್ಲಿ ಪಕ್ಷದ ಸಂಘಟನೆ ನಿರೀಕ್ಷಿತ ಮಟ್ಟದಲ್ಲಿಲ್ಲ. ನಾಯಕರು ಚುನಾವಣೆಗಾಗಿ ಮಾತ್ರ ಬಂದು ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಸೊರಬ ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ ಮಾತನಾಡಿ, ಭಾರತ ಪುಣ್ಯದ ಭೂಮಿಯಾಗಿದ್ದು, ಮಹಿಳೆಯರನ್ನು ಗೌರವದಿಂದ ಕಾಣುವ ಮನಸ್ಥಿತಿಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಹೇಳಿದರು. ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೊಳಿಯಮ್ಮ ಮಾತನಾಡಿ, ಮಹಿಳೆಯರು ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.
ಪುರಸಭೆ ಮಹಿಳಾ ಪೌರ ಕಾರ್ಮಿಕರು ಮತ್ತು ಇತರ ಸೇವಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಮಹಿಳೆಯರಿಗೆ ಸನ್ಮಾನಿಸಲಾಯಿತು. ಬಿಜೆಪಿ ಮಹಿಳಾ ಜಿಲ್ಲಾ ಉಪಾಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಸುಧಾ ಶಿವಪ್ರಸಾದ್, ಮಲ್ಲಿಕಾರ್ಜುನ, ಪ್ರಭಾವತಿ, ಭಾಗ್ಯಾ, ಗೌರಮ್ಮ ಭಂಡಾರಿ, ಪುರಸಭೆ ಸದಸ್ಯೆ ಜಯಲಕ್ಷ್ಮೀ, ಆಶಾ ರಂಗನಾಥ್, ಸವಿತಾ, ಪುಷ್ಪಾ ಇತರರಿದ್ದರು.