ಹೊಳೆಹೊನ್ನೂರು: ರಾಜ್ಯ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡಿ ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದರೂ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿದೆ ಎಂದು ನಿವೃತ್ತ ಶಿಕ್ಷಕ ಎನ್.ಎಸ್.ಪ್ರಹ್ಲಾದ್‌ರಾವ್ ಹೇಳಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಏರ್ಪಡಿಸಿದ್ದ ಶಾರದಾ ಪೂಜೆ ಹಾಗೂ 7ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಪಾಲಕರು ತಾವು ಓದಿದ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಬೇಕು. ಸರ್ಕಾರಿ ಶಾಲೆಗಳಿಗೆ ಸಮುದಾಯದ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
ಗ್ರಾಪಂ ಮಾಜಿ ಸದಸ್ಯ ಯು.ಕೆ.ವೆಂಕಟೇಶ್ ಮಾತನಾಡಿ, ಮಕ್ಕಳು ಮೊಬೈಲ್ ವ್ಯಾಮೋಹಕ್ಕೆ ಒಳಗಾಗದಂತೆ ಪಾಲಕರು ಎಚ್ಚರ ವಹಿಸಬೇಕು. ಕಲಿಕೆಗೆ ಅಗತ್ಯ ಪ್ರೋತ್ಸಾಹ ನೀಡಬೇಕು ಎಂದರು.
ಗ್ರಾಪಂ ಮಾಜಿ ಸದಸ್ಯೆ ನಿರ್ಮಲಾ ಗಣೇಶ್ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಿ ಉತ್ತಮ ವ್ಯಕ್ತಿಗಳಾಗಿ ರೂಪಿಸಬೇಕು. ಸಂಸ್ಕೃತಿ ಪರಂಪರೆಯ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಶಾಲೆಗೆ ವಿವಿಧ ಕೊಡುಗೆ ನೀಡಿದ ದಾನಿಗಳು ಹಾಗೂ ಪೌರಕಾರ್ಮಿಕ ಉಮೇಶ್ ಅವರಿಗೆ ಅಭಿನಂದಿಸಲಾಯಿತು. 7ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಎಲೆಕ್ಟ್ರಾನಿಕ್ ಗಡಿಯಾರ ಕೊಡುಗೆಯಾಗಿ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷೆ ಮಮತಾ ಮಂಜುನಾಥ್, ಸದಸ್ಯ ಅರುಣ್ ಕುಮಾರ್, ಸ್ಥಳೀಯರಾದ ಆರ್.ಉಮೇಶ್, ಇ.ರಮೇಶ್, ದೇವೇಂದ್ರ, ರಾಜು, ಗೋಪಾಲ, ಪೌರಕಾರ್ಮಿಕ ಉಮೇಶ್, ಮುಖ್ಯಶಿಕ್ಷಕ ಎಸ್.ಮಹಾಂತೇಶಪ್ಪ, ಸಹಶಿಕ್ಷಕಿ ಬಿ.ಟಿ.ಕಮಲಮ್ಮ, ಸಿ.ಪಿ.ಸುಜಾತಾ, ಬಿಂದು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.