ಸೊರಬ: ಗಗನಯಾತ್ರಿ ಸುನಿತಾ ವಿಲಿಯಮ್ಸ್ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಕಳೆದು ಭೂಮಿಗೆ ಸುರಕ್ಷಿತವಾಗಿ ಹಿಂದಿರುಗಿದ ಹಿನ್ನೆಲೆಯಲ್ಲಿ ವಿವಿಧ ಸಂಘ ಸಂಸ್ಥೆ ಮತ್ತು ಸಮಿತಿಗಳ ನೇತೃತ್ವದಲ್ಲಿ ಪಟ್ಟಣದ ಪುರಸಭೆ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ಚಿದಾನಂದ ಗೌಡ ಮಾತನಾಡಿ, 284 ದಿನ ಬಾಹ್ಯಾಕಾಶದಲ್ಲಿದ್ದ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಸುರಕ್ಷಿತವಾಗಿ ಭೂಮಿ ತಲುಪಿದ್ದು, ಶೀಘ್ರವೇ ಅವರ ಆರೋಗ್ಯ ಚೇತರಿಸಿ ಮತ್ತಷ್ಟು ಸಾಧನೆ ಮಾಡುವಂತಾಗಲಿ ಎಂದು ಆಶಿಸಿದರು.
ಪುರಸಭೆ ಸದಸ್ಯ ಎಂ.ಡಿ.ಉಮೇಶ್ ಮಾತನಾಡಿ, ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು ಸುರಕ್ಷಿತವಾಗಿ ಬರಲು ದೇಶಾದ್ಯಂತ ಜನತೆ ಪ್ರಾರ್ಥಿಸಿದ್ದರು. ಇದೀಗ ಹಿಂದಿರುಗಿರುವುದು ಸಂಭ್ರಮ ಹೆಚ್ಚಿಸಿದೆ ಎಂದರು.
ಸಮಿತಿಯಿಂದ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲಾಯಿತು. ಹೋರಾಟ ಸಮಿತಿ ಉಪಾಧ್ಯಕ್ಷ ದತ್ತ ಸೊರಬ, ಪ್ರಧಾನ ಕಾರ್ಯದರ್ಶಿ ವೀರೇಂದ್ರ ಗೌಡ, ಶರತ್ ಸ್ವಾಮಿ, ಸುಮನಾ, ಶ್ರೀ ಭೂತೇಶ್ವರ ಆಟೋ ಸಂಘದ ಅಧ್ಯಕ್ಷ ಟಿ.ಬಿ.ಹಾಲೇಶ್, ಶ್ರೀ ಮಾರಿಕಾಂಬ ಲಗೇಜ್ ಆಟೋ ಸಂಘದ ಅಧ್ಯಕ್ಷ ರಾಜು ಇತರರಿದ್ದರು.