ಹೊಳೆಹೊನ್ನೂರು: ಬದುಕಿನ ಹಾದಿಯಲ್ಲಿ ಮನುಷ್ಯ ಒಳ್ಳೆಯ ಸಂಗತಿಗಳ ಕಡೆಗೆ ಮನಸ್ಸನ್ನು ತೊಡಗಿಸಿಕೊಳ್ಳಬೇಕು ಎಂದು ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಆನವೇರಿ ಶ್ರೀ ಬನಶಂಕರಿ ದೇವಸ್ಥಾನದಲ್ಲಿ 6ನೇ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ಅಭಿಷೇಕ ಅಷ್ಟೋತ್ತರ ಹಾಗೂ ಇಷ್ಟಲಿಂಗ ಪೂಜೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಐಷರಾಮಿ ಸುಖ ಜೀವನದ ತುಡಿತದಲ್ಲಿ ಮನುಷ್ಯನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ ಎಂದು ತಿಳಿಸಿದರು.
ಸಮಾಜದಲ್ಲಿ ಅನ್ಯಾಯ, ಅಧರ್ಮ ಸೇರಿ ಅನೀತಿಗಳು ತಾಂಡವವಾಡುತ್ತಿವೆ. ಸಮಾಜದಲ್ಲಿ ವ್ಯಕ್ತಿಗಳು ಧರ್ಮಮಾರ್ಗದಲ್ಲಿ ನಡೆಯಬೇಕು. ಅನ್ಯಾಯ ಮಾರ್ಗಗಳಿಂದ ಗಳಿಸಿದ ಸಂಪತ್ತು ಎಂದಿಗೂ ಶಾಶ್ವತವಲ್ಲ. ಶರೀರದಲ್ಲಿನ ಮನಸ್ಸು ಪರಿಶುದ್ಧವಾದಾಗ ಮಾತ್ರ ವ್ಯಕ್ತಿಗಳಿಂದ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯ ಎಂದರು.
ಅಲ್ಪಾವಧಿಯಲ್ಲಿ ಅಧಿಕ ಸಂಪತ್ತು ಗಳಿಸುವ ವಿಷವರ್ತುಲದಲ್ಲಿ ಸಿಲುಕಿಕೊಂಡ ಜನರ ಜೀವನ ಅಜ್ಞಾನದತ್ತ ಸಾಗುತ್ತಿದೆ. ಒಳ್ಳೆಯ ಚಿಂತನೆಗಳನ್ನು ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಗ್ರಾಮದ ಪ್ರತಿಯೊಬ್ಬರೂ ಒಟ್ಟಾಗಿ ಸೇರಿ ಧಾರ್ಮಿಕ ಕಾರ್ಯಗಳಿಗೆ ಕೈಜೋಡಿಸಬೇಕು. ಗಳಿಸಿದ ದುಡಿಮೆಯಲ್ಲಿ ಅಲ್ಪಭಾಗ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂದು ಸಲಹೆ ನೀಡಿದರು. ದೇವಸ್ಥಾನ ಕಮಿಟಿಯ ನಾಗರಾಜಪ್ಪ, ಪರಮೇಶ್ವರಪ್ಪ, ರಾಜು, ಗುರುಮೂರ್ತಿ, ಜಗದೀಶ್, ಪ್ರದೀಪ್, ಈಶಪ್ಪ, ರಂಗೇಶ್ ಇತರರಿದ್ದರು.