ಶಿಕಾರಿಪುರ: ಜಾತ್ರೆ, ಉತ್ಸವ, ಹಬ್ಬಗಳು ನಾಡಿನ ಭವ್ಯ ಪರಂಪರೆಗೆ ಹಿಡಿದ ಕೈಗನ್ನಡಿ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಸಮೀಪದ ಸಾಲೂರು ಕಟ್ಟೆಮನೆ ಶ್ರೀ ಬನಶಂಕರಿ ಅಮ್ಮನವರ ಜಾತ್ರೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಜನರು ಜಾತ್ರೆ, ಉತ್ಸವಗಳ ಮೂಲಕ ನಿರಂತರ ದೇವರ ಆರಾಧನೆ ಮಾಡುತ್ತಾರೆ. ದೈವಿಕ ಚಿಂತನೆಗಳು ಮನಸಿನ ಕಲ್ಮಶಗಳನ್ನು ತೊಡೆದುಹಾಕಿ ಸದ್ವಿಚಾರಗಳನ್ನು ವೃದ್ಧಿಸುತ್ತವೆ ಎಂದು ತಿಳಿಸಿದರು.
ಶ್ರೀ ಬನಶಂಕರಿ ಮಾತೆ ಸ್ಥಳೀಯ ಭಕ್ತರ ಆರಾಧ್ಯ ದೇವಿ. ಲೋಕಕಲ್ಯಾಣಾರ್ಥ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಬೇಕು. ಸಹಸ್ರಾರು ಜನರ ನಂಬಿಕೆಯ ಪ್ರತಿರೂಪ ಶ್ರೀ ಬನಶಂಕರಿ ಅಮ್ಮ. ಧರ್ಮ ಮಾರ್ಗದಿಂದ ನಮಗೆ ಸಂತಸ, ನೆಮ್ಮದಿ ಮತ್ತು ಸಮೃದ್ಧಿ ಲಭಿಸುತ್ತದೆ ಎಂದರು.
ತಾಲೂಕಿನ ಎಲ್ಲ ಕಡೆಗಳಲ್ಲಿ ದೇವಾಲಯಗಳಿದ್ದು, ಪ್ರತಿ ದೇವಾಲಯ ಕೂಡ ನಮ್ಮ ಶ್ರದ್ಧಾಕೇಂದ್ರ. ಸುಗ್ಗಿ ಸಂದರ್ಭದಲ್ಲಿ ಬರುವ ಜಾತ್ರೆ, ಉತ್ಸವಗಳು ಜನಸಾಮಾನ್ಯರ ಬದುಕಿನ ಸಂಭ್ರಮದ ಸಾಕ್ಷಿರೂಪ ಎಂದು ಹೇಳಿದರು. ಬಿ.ವೈ.ರಾಘವೇಮದ್ರ ಅವರು ಸಾಲೂರು ಕಟ್ಟೆಮನೆ ಶ್ರೀ ಬನಶಂಕರಿ ಜಾತ್ರೆ ಅನ್ನದಾಸೋಹದಲ್ಲಿ ಭಕ್ತರಿಗೆ ಊಟ ಬಡಿಸಿದರು. ಶ್ರೀ ಬನಶಂಕರಿ ದೇವಾಲಯ ಸಮಿತಿ ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ಮತ್ತು ವಿವಿಧೆಡೆಗಳಿಂದ ಆಗಮಿಸಿದ ಭಕ್ತರು ಇದ್ದರು.