

ಹೊಳೆಹೊನ್ನೂರು: ಹಬ್ಬಗಳ ಆಚರಣೆ, ಸಂಪ್ರದಾಯಗಳ ಪಾಲನೆಯಲ್ಲಿ ವೈಜ್ಞಾನಿಕ ಕಾರಣಗಳು ಇರುತ್ತದೆ ಎಂದು ಜ್ಞಾನದೀಪ ಶಾಲೆ ಪ್ರಾಚಾರ್ಯ ಶ್ರೀಕಾಂತ್ ಎಂ. ಹೆಗಡೆ ಹೇಳಿದರು.
ಸಮಿಪದ ಜಾವಳ್ಳಿಯ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಸಂಕ್ರಾಂತಿ ಹಬ್ಬದಾಚರಣೆಯಲ್ಲಿ ಮಾತನಾಡಿ, ಸಂಕ್ರಾಂತಿ ಹಬ್ಬವನ್ನು ಕೊಯ್ಲು ಸುಗ್ಗಿ ಹಬ್ಬ ಎಂದು ಭಾರತೀಯ ಸಂಪ್ರದಾಯದಲ್ಲಿ ಹೇಳಲಾಗುತ್ತದೆ. ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ಚಲಿಸುವ ಪರಿವರ್ತನೆಯನ್ನು ಮಕರ ಸಂಕ್ರಾಂತಿ ಎನ್ನಲಾಗುತ್ತದೆ. ಬೇರೆ ರಾಜ್ಯಗಳಲ್ಲಿ ಇತರ ಹೆಸರಿನಿಂದ ಹಬ್ಬ ಆಚರಿಸಲಾಗುತ್ತದೆ. ಚಳಿಗಾಲದಲ್ಲಿ ದೇಹಕ್ಕೆ ಎಣ್ಣೆ ಅಂಶ ಹೆಚ್ಚಾಗಿ ಬೇಕಾಗಿರುತ್ತದೆ. ಆದ್ದರಿಂದ ಎಳ್ಳು-ಬೆಲ್ಲ, ಒಣ ಕೊಬ್ಬರಿ, ಶೇಂಗಾದೊಂದಿಗೆ ವಿಶೇಷ ಖಾದ್ಯ ತಯಾರಿಸಿ ಸವಿಯಲಾಗುತ್ತದೆ ಎಂದು ತಿಳಿಸಿದರು.
6ನೇ ತರಗತಿ ವಿದ್ಯಾರ್ಥಿಗಳು ಸಂಕ್ರಾಂತಿ ಹಬ್ಬದ ವಿಶೇಷತೆಯನ್ನು ನೃತ್ಯ ರೂಪಕದ ಮೂಲಕ ಪ್ರದರ್ಶಿಸಿದರು. ಹಿರಿಯ ಉಪಪ್ರಾಚಾರ್ಯ ಡಾ. ರೆಜಿ ಜೋಸೆಫ್, ಉಪಪ್ರಾಚಾರ್ಯೆ ವಾಣಿ ಕೃಷ್ಣಪ್ರಸಾದ್ ಇತರರಿದ್ದರು.