ಸೊರಬ: ವರದಾ-ದಂಡಾವತಿ ನದಿಗಳ ಸಂಗಮ ಕ್ಷೇತ್ರ ಬಂಕಸಾಣದ ಶ್ರೀ ಹೊಳೆಲಿಂಗೇಶ್ವರ ಸ್ವಾಮಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. ತಹಸೀಲ್ದಾರ್ ಮಂಜುಳಾ ಹೆಗಡಾಳ್ ರಥೋತ್ಸವಕ್ಕೆ ಚಾಲನೆ ನೀಡಿದರು.
ಹೊಳೆಲಿಂಗೇಶ್ವರ ಸ್ವಾಮಿ ಮಹಾರಥೋತ್ಸವ ಜಾತ್ರೆಯಲ್ಲಿ ವೀರಗಾಸೆ ತಂಡ ಹಾಗೂ ಕಲಾ ಮೇಳಗಳೊಂದಿಗೆ ಸಾವಿರಾರು ಜನರು ಪಾಲ್ಗೊಂಡಿದ್ದರು. ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಭಕ್ತರು ಹಾಗೂ ನೂತನ ದಂಪತಿಗಳು, ರಥದ ಕಳಸಕ್ಕೆ ಬಾಳೆ ಹಣ್ಣು ಎಸೆದು ಸಂಭ್ರಮಿಸಿದರು. ಜಾತ್ರೆ ನೋಡಲು ವಿವಿಧ ಊರುಗಳಿಂದ ಎತ್ತಿನ ಗಾಡಿ ಸೇರಿ ವಿವಿಧ ವಾಹನಗಳ ಮೂಲಕ ಕುಟುಂಬ ಸಮೇತ ಜನರು ಆಗಮಿಸಿದ್ದರು. ರೊಟ್ಟಿ, ಬುತ್ತಿ ಸೇರಿ ವಿವಿಧ ಬಗೆ ತಿನಿಸುಗಳನ್ನು ಸವಿದರು. ವರದಾ ನದಿಯಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೋಟಿಂಗ್‌ಗೆ ಜನರು ಮುಗಿಬಿದ್ದಿದ್ದರು. ಇನ್ನು ಕೆಲವರು ಬುಧವಾರ ನದಿಯಲ್ಲಿ ಸ್ನಾನ ಮಾಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಶಾಂತಾಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಶ್ರೀ ಕುಮಾರ ಕೆಂಪಿನ ಸಿದ್ದವೃಷಭೇಂದ್ರ ಸ್ವಾಮೀಜಿ, ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ, ಘೋಡಗೇರಿ ವಿರಕ್ತ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು.
ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ದೇವರಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ವಿಧಿವಿಧಾನಗಳು ನಡೆದವು. ಆನವಟ್ಟಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸದಾನಂದ ಗೌಡ, ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ, ನೀಲಕಂಠ ಗೌಡ, ಶ್ರೀಧರ್ ಹುಲ್ತಿಕೊಪ್ಪ, ರಾಜು ಗೌಡ, ರಾಜು ತುಮರಿಕಪ್ಪ, ಸಮಿತಿ ಸದಸ್ಯರು ಮತ್ತಿತರರಿದ್ದರು.